ತುಮಕೂರು: ನಗರದ ಹೊರ ವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 3ರಿಂದ 8ರ ವರೆಗೆ ಕಲಾ ಉತ್ಸವ ಏರ್ಪಡಿಸಲಾಗಿದೆ.
ಒಂದು ವಾರದ ಕಾಲ ‘ಆರೋಹಣ 2024’, ‘ಸಾಂಸ್ಕೃತಿಕ ಕಲಾ ಉತ್ಸವ’ ನಡೆಯಲಿದೆ. ಕಲೆ, ಫ್ಯಾಷನ್-ಶೋ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ರಂಗಭೂಮಿಯ ಮಿಶ್ರಣದೊಂದಿಗೆ ಈ ಉತ್ಸವ ನಡೆಯಲಿದೆ. ವೈದ್ಯಕೀಯ ಕಾಲೇಜು ಆವರಣದಲ್ಲಿ ‘ಸಾಹೇ’ ವಿಶ್ವವಿದ್ಯಾಲಯ ಕುಲಾಧಿಪತಿ ಜಿ.ಪರಮೇಶ್ವರ ಕಲಾ ಉತ್ಸವದ ಟೀಸರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿ, ‘ವೈದ್ಯಕೀಯ ಶಿಕ್ಷಣ ಪಡೆಯುವವರು ಶಿಕ್ಷಣದ ಜತೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆ ಕಲಿಯಬೇಕು. ಆಗ ಅವರಲ್ಲಿ ಕೌಶಲ, ಸೌಂದರ್ಯಪ್ರಜ್ಞೆ ಬೆಳೆಯಲು ಸಾಧ್ಯ. ಇಂತಹ ಉತ್ಸವಗಳಿಗೆ ವೇದಿಕೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ಕೆಲಸವಾಗುತ್ತದೆ’ ಎಂದರು.
ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ. ಈ ಅವಧಿಯಲ್ಲಿ ಹೆಚ್ಚಿನ ಅಧ್ಯಯನದ ಜತೆಗೆ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜ್ಞಾನದ ಮಿತಿ ಹೆಚ್ಚಿಸಿಕೊಳ್ಳಬೇಕು. ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವ ಗುಣಗಳ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗುತ್ತವೆ ಎಂದು ಹೇಳಿದರು.
ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಎಂ.ಝಡ್.ಕುರಿಯನ್, ಪರೀಕ್ಷಾ ನಿಯಂತ್ರಕ ಗುರುಶಂಕರ್, ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಉಪಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್, ಸಿಇಒ ಕಿರಣ್‌ಕುಮಾರ್, ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್‌ಕುಡುವ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.