ADVERTISEMENT

ಮಧುಗಿರಿ ತಹಶೀಲ್ದಾರ್, ಅವರ ಪತ್ನಿ ಅವಾಚ್ಯ ನಿಂದನೆ;ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ

ಮಹಿಳಾ ನೌಕರಳಿಗೆ ನಿಂದನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 15:28 IST
Last Updated 25 ಆಗಸ್ಟ್ 2019, 15:28 IST
   

ತುಮಕೂರು: ತಹಶೀಲ್ದಾರ್ ಮತ್ತು ಅವರ ಪತ್ನಿ ಮಹಿಳಾ ನೌಕರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು ಎನ್ನಲಾದ ಕೃತ್ಯದ ಕುರಿತ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮಲೆಕ್ಕಿಗರಾದ ಮಂಜುಳಾ ಅವರಿಗೆ ತಹಶೀಲ್ದಾರ್ ನಂದೀಶ್ ಮತ್ತು ಅವರ ಪತ್ನಿ ತ್ರಿವೇಣಿ ಇಬ್ಬರು ಸೇರಿಕೊಂಡು ಹಿಗ್ಗಾ ಮುಗ್ಗಾ ಅವಾಚ್ಯವಾಗಿ ನಿಂದಿಸಿರುವುದು ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದು, ಆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಹಶೀಲ್ದಾರ್ ಮತ್ತು ಅವರ ಪತ್ನಿಯ ವಿರುದ್ದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಅಸಭ್ಯ ವರ್ತನೆಯನ್ನು ಕೇಳಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ತಹಶೀಲ್ದಾರ್ ಮತ್ತು ಪತ್ನಿ ವಿರುದ್ದ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅವರಿಗೂ ಕೂಡ ಗ್ರಾಮಲೆಕ್ಕಿಗರಾದ ಮಂಜುಳಾ ದೂರು ನೀಡಿದ್ದರು.

ಅಲ್ಲದೇ, ತಹಶೀಲ್ದಾರ್ ಮತ್ತು ಅವರ ಪತ್ನಿವಿರುದ್ಧ ತಾಲ್ಲೂಕು ಕಚೇರಿ ಮುಂಭಾಗ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಪ್ರತಿಭಟಿಸಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಅವರನ್ನು ಕರೆಸಿಕೊಂಡು ಮಂಜುಳಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ತಪ್ಪು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಬುದ್ದಿವಾದ ಹೇಳಿ ಕಳಿಸಿದ್ದರು.

ತಹಶೀಲ್ದಾರ ಹೇಳಿಕೆ: ‘ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರ ಮುಂದೆ ಗ್ರಾಮಲೆಕ್ಕಿಗರಾದ ಮಂಜುಳಾ ಅವರ ಕ್ಷಮೆ ಕೇಳಿದ್ದೇನೆ. ಆದರೂ ಕೂಡ ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರುವುದು ನನಗೆ ನೋವುಂಟಾಗಿದೆ. ನನ್ನ ಕೆಲಸಕ್ಕೆ ರಾಜೀನಾಮೆ ನೀಡುವಷ್ಟು ಬೇಸರವಾಗುತ್ತಿದೆ’ ಎಂದು ತಹಶೀಲ್ದಾರ್ ನಂದೀಶ್ ’ಪ್ರಜಾವಾಣಿ’ಗೆ ತಿಳಿಸಿದರು.

ಹಲವು ದಿನಗಳಿಂದ ಗ್ರಾಮಲೆಕ್ಕಿಗರಾದ ಮಂಜುಳಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.