
ತುಮಕೂರು: ಈಗಿನ ಶಿಕ್ಷಣ ಸಮಾನ ಅವಕಾಶ ಒದಗಿಸುವಲ್ಲಿ ವಿಫಲವಾಗಿದೆ. ವೈಚಾರಿಕತೆ ಬೆಳೆಸುವುದರಲ್ಲಿ ಸೋತಿದೆ ಎಂದು ಲೇಖಕಿ ಆಶಾ ಬಗ್ಗನಡು ವಿಷಾದಿಸಿದರು.
ನಗರದಲ್ಲಿ ಶನಿವಾರ ಸ್ಲಂ ಜನಾಂದೋಲನ ಕರ್ನಾಟಕ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಭೀಮಾ ಕೊರೆಗಾಂವ್ ವಿಜಯೋತ್ಸವ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ‘ಭಾರತದಲ್ಲಿ ದುಡಿಯುವ ಮಹಿಳೆಯರ ಹೋರಾಟದ ಹೆಜ್ಜೆಗಳು’ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಅನಿಷ್ಟಗಳಿಗೆ ಶಿಕ್ಷಣ ಮದ್ದಾಗಬಹುದು ಎಂಬ ನಮ್ಮ ತಿಳಿವಳಿಕೆ ತಪ್ಪಾಗಿದೆ. ವಿದ್ಯಾವಂತರು ವಿಚಾರವಂತರಾಗದೆ, ಸಮಾಜಮುಖಿಯಾಗದೆ ಸ್ವಾರ್ಥದಲ್ಲಿ ಮುಳುಗಿದ್ದಾರೆ. ವಿಶ್ವ ಸಂಸ್ಥೆ ಮಾಹಿತಿ ಪ್ರಕಾರ ಭಾರತದಲ್ಲಿ ಶೇ 30ರಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ ಎಂದರು.
ಶಿಕ್ಷಣ ವಂಚಿತ ಮಕ್ಕಳು ಅಪೌಷ್ಟಿಕತೆ, ಕಂದಾಚಾರಕ್ಕೆ ಒಳಗಾಗಿ ಮನುವಾದದ ಕಪಿಮುಷ್ಟಿಯಲ್ಲಿ ಸಿಲುಕುತ್ತಿದ್ದಾರೆ. ಇಂತಹ ಅನಿಷ್ಟಗಳ ವಿರುದ್ಧ ದುಡಿಯುವ ಮಹಿಳೆಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ನಮಗೆಲ್ಲ ಮಾದರಿ ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ಸಂಚಾಲಕಿ ಅನುಪಮಾ, ‘ಸಮಾಜದಲ್ಲಿ ಮೌಢ್ಯ, ಜಾತಿ ಪದ್ಧತಿ ತನ್ನ ಪಟ್ಟುಗಳನ್ನು ಬಿಗಿಗೊಳಿಸುತ್ತಿದೆ. ಶಾಲೆಗಳೇ ಜಾತೀಯತೆ ಪರಿಚಯಿಸುವ ತಾಣಗಳಾಗಿವೆ. ಇಂತಹ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು’ ಎಂದು ತಿಳಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಧನಂಜಯ, ಮುಬಾರಕ್, ಶಾಬುದ್ದೀನ್, ಶಾರದಮ್ಮ, ಗಂಗಾ, ಗುಲ್ನಾಜ್, ಮಂಗಳಮ್ಮ, ಹನುಮಕ್ಕ, ಪೂರ್ಣಿಮಾ, ವಸಂತಮ್ಮ, ಅಬೀಬುನ್ನೀಸಾ, ಜಯಮ್ಮ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.