ADVERTISEMENT

ಸಂಶಯಾಸ್ಪದ ವ್ಯಕ್ತಿಗಳ ಕಂಡರೆ ಎಚ್ಚರವಿರಲಿ

ರೈಲ್ವೆ ಪ್ರಯಾಣಿಕರ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳಿಂದ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 12:33 IST
Last Updated 6 ಡಿಸೆಂಬರ್ 2018, 12:33 IST
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಗುರುವಾರ ರೈಲ್ವೆ ರಕ್ಷಣಾದಳದ ಅಧಿಕಾರಿಗಳು ಪ್ರಯಾಣಿಕರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು. ಕುಬೇರಪ್ಪ, ವೆಂಕಟೇಶ್, ರಮೇಶ್‌ಬಾಬು ಇದ್ದರು
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಗುರುವಾರ ರೈಲ್ವೆ ರಕ್ಷಣಾದಳದ ಅಧಿಕಾರಿಗಳು ಪ್ರಯಾಣಿಕರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು. ಕುಬೇರಪ್ಪ, ವೆಂಕಟೇಶ್, ರಮೇಶ್‌ಬಾಬು ಇದ್ದರು   

ತುಮಕೂರು: ‘ನೀವು ಪ್ರಯಾಣಿಸುವಾಗ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ತುರ್ತಾಗಿ ರೈಲ್ವೆ ರಕ್ಷಣಾ ದಳ( ರೈಲ್ವೆ ಪೊಲೀಸ್) ಉಚಿತ ಕರೆ ಸಂಖ್ಯೆ 182ಗೆ ಕರೆ ಮಾಡಿ’

‘ರೈಲಿನಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಅಪರಿಚಿತರು ಕೊಡುವ ತಿಂಡಿ, ತಿನಿಸುಗಳನ್ನು ಪಡೆಯಬೇಡಿ’

’ಒಂದು ವೇಳೆ ಅಂತಹವರಿಂದ ಏನನ್ನಾದರೂ ಪಡೆದರೆ ನಿಮ್ಮ ಬೆಲೆ ಬಾಳುವ ಒಡವೆ, ವಸ್ತ್ರ, ವಸ್ತುಗಳನ್ನು ಕಳೆದುಕೊಳ್ಳುವ ಸಂಭವ ಇರುತ್ತದೆ’

ADVERTISEMENT

ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಯಾಣಿಕರ ಗಮನ ಸೆಳೆದು ಎಚ್ಚರಿಕೆಯ ಸಂದೇಶಗಳನ್ನು ನೀಡಿದರು.

‘ಮಾನವ ಕಳ್ಳ ಸಾಗಾಣಿಕೆ’ ಬಗ್ಗೆ ರೈಲ್ವೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಪ್ರಯಾಣಿಕರ ಸುರಕ್ಷತಾ ಸ‌ಪ್ತಾಹ ಕಾರ್ಯಕ್ರಮದಲ್ಲಿ ಈ ರೀತಿಯ ಎಚ್ಚರಿಕೆಯ ಸಂದೇಶಗಳನ್ನು ನೀಡಿದರು. ಸುರಕ್ಷತೆ ಕುರಿತ ಸಂದೇಶಗಳುಳ್ಳ ಕರಪತ್ರಗಳನ್ನು ರೈಲ್ವೆ ಪ್ರಯಾಣಿಕರಿಗೆ ಹಂಚಿದರು.

ರೈಲ್ವೆ ರಕ್ಷಣಾದಳದ ಸಬ್‌ಇನ್‌ಸ್ಪೆಕ್ಟರ್ ಕುಬೇರಪ್ಪ, ‘ರೈಲ್ವೆ ರಕ್ಷಣಾ ದಳದ ಮುಖ್ಯ ಸುರಕ್ಷಾ ಆಯುಕ್ತರ ಆದೇಶದ ಮೇರೆಗೆ ಈ ಜಾಗೃತಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

‘ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುವಾಗ ತಮ್ಮ ಸರಕುಗಳನ್ನು (ಲಗೇಜ್) ಸುರಕ್ಷಿತವಾಗಿಟ್ಟುಕೊಳ್ಳಲು ಸೆಫ್ಟಿ ಚೈನ್ ಹಾಕುವುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ರೈಲ್ವೆ ನಿಲ್ದಾಣದಲ್ಲಿ ಹಳಿಗಳನ್ನು (ಟ್ರ್ಯಾಕ್) ದಾಟುವುದು ಅಪರಾಧ. ಒಂದು ವೇಳೆ ಹಳಿಗಳನ್ನು ದಾಟಿದರೆ ಅಂಥವರಿಗೆ ₹ 500 ದಂಡ ವಿಧಿಸಲಾಗುವುದು. ಹಾಗೆಯೇ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡದೇ ಅನೈರ್ಮಲ್ಯಕ್ಕೆ ಕಾರಣವಾಗುವವರಿಗೆ ₹ 200 ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ರೈಲ್ವೆ ಪೊಲೀಸ್ ಅಧಿಕಾರಿ ವೆಂಕಟೇಶ್, ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಕೆ.ಸಿ.ರಮೇಶ್‌ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.