ADVERTISEMENT

ಟೊಮೆಟೊಗೆ ಬ್ಯಾಕ್ಟೀರಿಯಾ ರೋಗ: ಆತಂಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:48 IST
Last Updated 8 ಅಕ್ಟೋಬರ್ 2020, 3:48 IST
ಪಾವಗಡ- ಶ್ರೀರಂಗಪುರ ಮಾರ್ಗದ ಪವನ್ ಅವರ ತೋಟದಲ್ಲಿ ಟೊಮೊಟೊ ಬೆಳೆಗೆ ರೋಗ ಬಂದಿರುವುದು
ಪಾವಗಡ- ಶ್ರೀರಂಗಪುರ ಮಾರ್ಗದ ಪವನ್ ಅವರ ತೋಟದಲ್ಲಿ ಟೊಮೊಟೊ ಬೆಳೆಗೆ ರೋಗ ಬಂದಿರುವುದು   

ಪಾವಗಡ: ತಾಲ್ಲೂಕಿನ ವಿವಿಧೆಡೆ ಟೊಮೆಟೊಗೆ ಬ್ಯಾಕ್ಟೀರಿಯಲ್ ಸ್ಪಾಟ್ ರೋಗ ಕಂಡುಬಂದಿದ್ದು, ರೈತರಿಗೆ ಬೆಳೆ ಹಾನಿಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಟೊಮೆಟೊ ಗಿಡದ ಸುಳಿ ಒಣಗಿದಂತಾಗಿ, ಕಾಯಿಯ ಮೇಲೆ ಗುಳ್ಳೆ ಬರುತ್ತಿದೆ. ಇದಕ್ಕೆ ಸಮರ್ಪಕ ಔಷಧಿ ತಿಳಿಯದೆ ರೈತರು ಪರದಾಡುತ್ತಿದ್ದಾರೆ. ಅನುಭವಿ ರೈತರೂ ಸಹ ಈ ರೋಗದ ಬಗ್ಗೆ ಮಾಹಿತಿ ಇಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ ರೈತರು ಇದೀಗ ಫಸಲು ಬರುವ ವೇಳೆಯಲ್ಲಿ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ಸುಮಾರು 5 ಎಕರೆ ಪ್ರದೇಶದಲ್ಲಿ ₹ 1.5 ಲಕ್ಷ ಖರ್ಚು ಮಾಡಿ ಬೆಳೆ ಬೆಳೆದಿದ್ದೇನೆ. ವಾರದಿಂದ ಕಾಯಿಗಳ ಮೇಲೆ ಬೊಬ್ಬೆ ಬರುತ್ತಿದೆ. ಗೊಬ್ಬರದ ಅಂಗಡಿಗಳವರು ಕೊಡುವ ಔಷಧಿ ಸಿಂಪಡಿಸಿ ಸಾಕಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ತಜ್ಞರು ನೀಡಿದ ಸಲಹೆಗಳನ್ನು ಪಾಲಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದು ಟೊಮೆಟೊ ಬೆಳೆಗಾರ ಪವನ್ ಅಳಲು ತೋಡಿಕೊಂಡರು.

ಪಾವಗಡದಲ್ಲಿ ಸದಾ ಬಿಸಿಲು ಇರುತ್ತದೆ. ಆದರೆ ಈ ಬಾರಿ ಹೆಚ್ಚು ಮಳೆ ಬಿದ್ದು ಮೋಡ ಕವಿದ ವಾತಾವರಣ ಇರುವುದರಿಂದ ಇತ್ತೀಚೆಗೆ ಈ ರೋಗ ಕಂಡು ಬರುತ್ತಿದೆ ಎಂಬುದು ರೈತರ ವಿಶ್ಲೇಷಣೆ. ಈ ಬಗ್ಗೆ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಹೀರ್ ಬಾಷ ಪ್ರತಿಕ್ರಿಯಿಸಿ, ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ವಾತಾವರಣದಲ್ಲಿ ಬದಲಾವಣೆಯಾಗಿದೆ. ಹೀಗಾಗಿ ಬ್ಯಾಕ್ಟೀರಿಯಲ್‌ ಸ್ಪಾಟ್ ರೋಗ ಕಂಡು ಬರುತ್ತಿದೆ. ಇದು ಆರಂಭದಲ್ಲಿ ಬಿಳಿ ಬಣ್ಣದಲ್ಲಿದ್ದು ನಂತರ ಕಪ್ಪಾಗುತ್ತದೆ. ವಾತಾವರಣ ಸರಿಹೋದಲ್ಲಿ ರೋಗ ಕಡಿಮೆಯಾಗುತ್ತದೆ. ಆದರೆ ಈಗಾಗಲೇ ಗಿಡಗಳಿಗೆ ರೋಗ ಬಂದಿರುವುದರಿಂದ ಇತರೆ ಗಿಡಗಳಿಗೆ ವ್ಯಾಪಿಸದಂತೆ ತಡೆಯಲು ಔಷಧಿ ಸಿಂಪಡಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.