ADVERTISEMENT

ತುಮಕೂರು | ಪುಂಡರ ತಾಣವಾದ ಬ್ಯಾಡ್ಮಿಂಟನ್‌ ಕೋರ್ಟ್

₹2.78 ಕೋಟಿ ವೆಚ್ಚ; ಕಾಮಗಾರಿ ಅಪೂರ್ಣ; ಮುಂದುವರಿದ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:43 IST
Last Updated 22 ನವೆಂಬರ್ 2025, 6:43 IST
ತುಮಕೂರಿನ ಗಾರ್ಡನ್‌ ರಸ್ತೆಯಲ್ಲಿರುವ ಶಟಲ್‌ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣದ ಹೊರನೋಟ
ತುಮಕೂರಿನ ಗಾರ್ಡನ್‌ ರಸ್ತೆಯಲ್ಲಿರುವ ಶಟಲ್‌ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣದ ಹೊರನೋಟ   

ತುಮಕೂರು: ನಗರದ ಗಾರ್ಡನ್‌ ರಸ್ತೆಯ ವಸತಿ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಶಟಲ್‌ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೂ ಮುನ್ನವೇ ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಅರ್ಧ ಕಟ್ಟಿ ಬಿಟ್ಟಿರುವ ಕಟ್ಟಡ ಪುಂಡರ ಪಾಲಿನ ನೆಚ್ಚಿನ ಸ್ಥಳವಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದಿಂದ (ಟೂಡಾ) ಸಿ.ಎ ನಿವೇಶನದಲ್ಲಿ ₹2.78 ಕೋಟಿ ವೆಚ್ಚದಲ್ಲಿ ಮೂರು ಶಟಲ್ ಕೋರ್ಟ್‌ ಸಿದ್ಧಪಡಿಸಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ 2022ರ ಕೊನೆಯಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. 2023ರ ಜೂನ್‌ ಅಂತ್ಯಕ್ಕೆ ಶೇ 80ರಷ್ಟು ಕೆಲಸ ಪೂರ್ಣಗೊಂಡಿತ್ತು. ಅನುದಾನದ ಕೊರತೆಯಿಂದ ಕಳೆದ ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.

ಮೊದಲ ಹಂತದಲ್ಲಿ ₹1.83 ಕೋಟಿ ವೆಚ್ಚ ಮಾಡಲಾಗಿದೆ. ಈಗ ಕಾಮಗಾರಿ ಮುಂದುವರಿಸಲು ಮತ್ತೆ ₹95 ಲಕ್ಷ ಕಾಯ್ದಿರಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಒಟ್ಟು ₹2.78 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅರ್ಧಂಬರ್ಧ ಕೆಲಸ ಆಗಿರುವ ಶೆಟಲ್‌ ಕೋರ್ಟ್ ಈಗ ಕಬಡ್ಡಿ, ಕ್ರಿಕೆಟ್‌ ಆಡಲು ಬಳಕೆಯಾಗುತ್ತಿದೆ. ಕ್ರೀಡಾಂಗಣದ ಬಳಿಯೇ ಮದ್ಯದ ಪಾರ್ಟಿ ನಡೆಯುತ್ತಿದೆ ಎಂಬುವುದಕ್ಕೆ ಇಲ್ಲಿ ಎಸೆದಿರುವ ಖಾಲಿ ಬಾಟಲಿಗಳು ಸಾಕ್ಷಿ ನುಡಿಯುತ್ತಿವೆ.

ADVERTISEMENT

ಮಲ–ಮೂತ್ರ ವಿಸರ್ಜನೆಗೂ ದಾರಿ ಮಾಡಿಕೊಂಡಿದ್ದಾರೆ. ಹೊಸ ಕೋರ್ಟ್‌ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಶಟಲ್‌ ಕೋರ್ಟ್‌ ಪಕ್ಕದಲ್ಲಿಯೇ ಸ್ಕೇಟಿಂಗ್‌ ಕ್ರೀಡೆಗೆ ಜಾಗ ಮೀಸಲಿಡಲಾಗಿದೆ. ಈವರೆಗೆ ಸ್ಕೇಟಿಂಗ್ ಅಂಕಣ ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿಲ್ಲ. ಜಾಗ ಖಾಲಿಯಾಗಿ ಉಳಿದಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು ಕ್ರೀಡಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದರೂ ಸದ್ಬಳಕೆಯಾಗುತ್ತಿಲ್ಲ. ದುರುಪಯೋಗ ಹೆಚ್ಚಾಗಿದ್ದು, ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ.

ನಗರದ ಹೊರ ಭಾಗದಲ್ಲಿ ಶಟಲ್‌ ಕೋರ್ಟ್ ನಿರ್ಮಾಣಕ್ಕೆ ಪ್ರಾರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾ ಕ್ರೀಡಾಂಗಣದ ಅಕ್ಕಪಕ್ಕದಲ್ಲಿಯೇ ಕೋರ್ಟ್‌ ಆರಂಭಕ್ಕೆ ಒತ್ತಾಯಗಳು ಕೇಳಿ ಬಂದಿದ್ದವು. ಜಾಗದ ಕೊರತೆ ಕಾರಣಕ್ಕೆ ಗಾರ್ಡನ್‌ ರಸ್ತೆಗೆ ಶಟಲ್‌ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ.

ನಗರದ ಕ್ಯಾತ್ಸಂದ್ರದ ಟೂಡಾ ಬಡಾವಣೆಯಲ್ಲಿ ನಿರ್ಮಿಸಿರುವ ಕ್ರೀಡಾ ಸಮುಚ್ಚಯ ದೂಳು ಹಿಡಿದಿದೆ. ₹4.50 ಕೋಟಿ ವೆಚ್ಚದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಮೂರು ಅಂತಸ್ತಿನ ಕಟ್ಟಡದ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಶಟಲ್‌ ಕ್ರೀಡಾಂಗಣವೂ ಇದೇ ಹಾದಿಯತ್ತ ಸಾಗುತ್ತಿದೆ.

‘ಟೂಡಾಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಪ್ರಶ್ನಿಸುವವರು ಇಲ್ಲದಂತಾಗಿದೆ. ನಿರ್ಧಾರ ತೆಗೆದುಕೊಳ್ಳುವವರು ಇಲ್ಲದೆ ಯಾವುದೇ ಕೆಲಸಗಳು ವೇಗ ಪಡೆದುಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕ್ರೀಡಾ ಕ್ಷೇತ್ರದ ಕಡೆಗೆ ಗಮನ ಹರಿಸಬೇಕು. ಕನಿಷ್ಠ ಸೌಲಭ್ಯ ಕಲ್ಪಿಸಬೇಕು’ ಎಂದು ಹಿರಿಯ ಕ್ರೀಡಾಪಟುವೊಬ್ಬರು ಒತ್ತಾಯಿಸಿದರು.

ಕ್ರೀಡಾಂಗಣದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಕ್ರೀಡಾಂಗಣದ ಬಳಿ ಮದ್ಯದ ಬಾಟಲಿ
ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಪಾರ್ಕ್‌ನಲ್ಲಿ ಗಿಡಗಂಟಿ ಬೆಳೆದಿರುವುದು

ಅಕ್ರಮ ಚಟುವಟಿಕೆ ಹೆಚ್ಚಳ ನಿರ್ಮಾಣ ಕಾಮಗಾರಿ ಸ್ಥಗಿತ ಆರಂಭಕ್ಕೆ ಅಧಿಕಾರಿಗಳ ನಿರಾಸಕ್ತಿ

ಶಟಲ್‌ ಕೋರ್ಟ್‌ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿದೆ. ಈಗಾಗಲೇ ಟೆಂಡರ್‌ ಕರೆದಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು

-ಎನ್‌.ಆರ್‌.ಉಮೇಶ್‌ಚಂದ್ರ ಟೂಡಾ ಆಯುಕ್ತ

ಪಾರ್ಕ್‌ ಅವ್ಯವಸ್ಥೆ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇರುವ ಪಾರ್ಕ್‌ನಲ್ಲಿ ಗಿಡಗಂಟಿಗಳು ಬೆಳೆದಿದ್ದು ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಡೀ ಪಾರ್ಕ್‌ ಅವ್ಯವಸ್ಥೆಯ ತಾಣವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾರ್ಕ್‌ ಅಭಿವೃದ್ಧಿ ಪಡಿಸಲಾಗಿತ್ತು. ಈಗ ನಿರ್ವಹಣೆ ಇಲ್ಲದೆ ಸೊರಗಿದೆ. ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಾಣಿಸುತ್ತವೆ. ಕಾಂಪೌಂಡ್‌ ನಿರ್ಮಾಣ ಮಾಡಿಲ್ಲ. ಒಂದು ಗೇಟ್‌ ಅಳವಡಿಸಿ ಪಾರ್ಕ್‌ ರಕ್ಷಣೆಗೆ ಅಗತ್ಯ ಕ್ರಮ ವಹಿಸಿಲ್ಲ. ಉದ್ಯಾನದ ಸುತ್ತಲೂ ಅಳವಡಿಸಿದ ತಂತಿ ಬೇಲಿ ಕಿತ್ತು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಗಾಢ ಮೌನ ವಹಿಸಿದ್ದಾರೆ ಎಂಬ ದೂರು ಸಾಮಾನ್ಯವಾಗಿದೆ.