ADVERTISEMENT

ಜಿಲ್ಲೆಯಾದ್ಯಂತ ಸರಳ ಬಕ್ರೀದ್

ಮಸೀದಿಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರಾರ್ಥನೆ; ಹೊಸ ಬಟ್ಟೆ ತೊಟ್ಟು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 14:56 IST
Last Updated 1 ಆಗಸ್ಟ್ 2020, 14:56 IST
ನಗರದ ಬಾರ್‌ಲೈನ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು
ನಗರದ ಬಾರ್‌ಲೈನ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು   

ತುಮಕೂರು: ಕೊರೊನಾ ತಡೆಯ ಕಟ್ಟುನಿಟ್ಟಿನ ಮಾರ್ಗಸೂಚಿಗಳ ನಡುವೆ ಜಿಲ್ಲೆಯಲ್ಲಿ ಶನಿವಾರ ಬಕ್ರೀದ್ ಆಚರಣೆ ಸರಳವಾಗಿ ನಡೆಯಿತು.

ಮುಸ್ಲಿಮರು ಮನೆಗಳಲ್ಲಿ ಸಡಗರ ಮನೆ ಮಾಡಿತ್ತು. ಈ ಹಿಂದಿನ ವರ್ಷಗಳಂತೆ ಪ್ರಾರ್ಥನೆ ಸಲ್ಲಿಸಲು ಮಸೀದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ಹೆಚ್ಚಿನ ಜನರು ಬಂದರೂ ಒಮ್ಮೆ 50 ಜನರ ತಂಡ ಪ್ರಾರ್ಥನೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ತಂಡ ತಂಡಗಳಾಗಿ ಪ್ರಾರ್ಥನೆ ಸಲ್ಲಿಸಿದರು.

ಮನೆಗಳಲ್ಲಿ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ನಾನಾ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿದರು. ಬಹಿರಂಗ ಆಚರಣೆಗಳು ಕಡಿಮೆಯಾಗಿದ್ದು ಮನೆಗಳಿಗೆ ಆಚರಣೆಗಳು ಸೀಮಿತವಾಗಿದ್ದವು. ಮಸೀದಿಗೆ ಬಂದಿದ್ದ ಬಹುತೇಕ ಪರಸ್ಪರ ಆಲಿಂಗನಕ್ಕೆ ಮುಂದಾಗದೆ ಶುಭಾಶಯವಿನಿಮಯ ಮಾಡಿಕೊಂಡರು.

ADVERTISEMENT

ಬಾರ್‌ಲೈನ್ ರಸ್ತೆಯಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮಾಜಿ ಶಾಸಕ ಷಫಿ ಅಹಮದ್, ‘ಕೊರೊನಾ ತಡೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ನಾವು ಹಬ್ಬವನ್ನು ಮಾಡುತ್ತಿದ್ದೇವೆ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಾಗ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುತ್ತಿದ್ದೇವೆ’ ಎಂದರು.

ಕೊರೊನಾ ಸೋಂಕು ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಹಬ್ಬ ಆಚರಿಸಲಾಗಿದೆ ಎಂದು ಹೇಳಿದರು.

ಯಾರಬ್ ನಗರ, ಪಿ.ಎಚ್.ಕಾಲೊನಿ, ಎನ್‌.ಆರ್.ಕಾಲೊನಿ ಹೀಗೆ ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿಯೂ ಪ್ರಾರ್ಥನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.