ADVERTISEMENT

ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:59 IST
Last Updated 25 ಫೆಬ್ರುವರಿ 2026, 6:59 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ಬ್ಯಾಂಕ್ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ಬ್ಯಾಂಕ್ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು   

ತುಮಕೂರು: ಬ್ಯಾಂಕ್ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಜಿಲ್ಲಾ ಸಮಿತಿ ಹಾಗೂ ಬ್ಯಾಂಕ್ ನಿವೃತ್ತರ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನಿವೃತ್ತ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದರು.

ಬ್ಯಾಂಕ್ ನೌಕರರ ಪಿಂಚಣಿಯನ್ನು 1995ರಿಂದ ಪರಿಷ್ಕರಿಸಿಲ್ಲ. ಆರ್‌ಬಿಐ ನೌಕರರ ಪಿಂಚಣಿಯನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯನ್ನು ಹತ್ತು ವರ್ಷಗಳಿಗೆ ಒಮ್ಮೆ ಪರಿಷ್ಕರಿಸಲಾಗುತ್ತದೆ. ಆದರೆ ನಮ್ಮ ಪಿಂಚಣಿ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ನಿಧಿಯಲ್ಲಿ ₹4 ಲಕ್ಷ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಇಷ್ಟು ದೊಡ್ಡ ಮೊತ್ತ ಸಂಗ್ರಹವಾಗಲು ಬ್ಯಾಂಕ್ ನೌಕರರು ಕೊಡುಗೆ ನೀಡಿದ್ದಾರೆ. ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡು, ಸೇವೆಯಲ್ಲಿರುವ ಬ್ಯಾಂಕ್ ಉದ್ಯೋಗಿಗಳು ಪ್ರತಿ ತಿಂಗಳೂ ಈ ನಿಧಿಗೆ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಬ್ಯಾಂಕ್‌ಗಳು ಸಹ ಸಮಾನ ಮೊತ್ತ ನೀಡುತ್ತಿವೆ. ಆದರೂ ನಿವೃತ್ತರ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಬ್ಯಾಂಕ್ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಮೇಶ್, ಜಿಲ್ಲಾ ಕಾರ್ಯದರ್ಶಿ ಎನ್.ಜಿ.ಮಹಲಿಂಗಪ್ಪ, ಸಂಘಟನೆ ಪ್ರಮುಖರಾದ ಕೆ.ವಿಶ್ವನಾಥನಾಯಕ್, ಸಿ.ಎನ್.ಪ್ರಸಾದ್, ನಟರಾಜು, ಜಾನಕಿರಾಮ್, ಬ್ರಹ್ಮರಾಯಪ್ಪ, ಧನಲಕ್ಷ್ಮಿ ಬಾಯಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು

* ಪಿಂಚಣಿ ಪರಿಷ್ಕರಣೆ ಮಾಡಬೇಕು

* ಖಾಸಗಿ ಬ್ಯಾಂಕ್ ನಿವೃತ್ತ ನೌಕರರಿಗೆ ಎಕ್ಸ್‌ಗ್ರೇಷಿಯಾ ಪಾವತಿಸಬೇಕು

* ಎಲ್ಲ ನಿವೃತ್ತ ನೌಕರರಿಗೆ ಬ್ಯಾಂಕ್‌ಗಳಿಂದಲೇ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು

* ಐಬಿಎ ವತಿಯಿಂದ ನಿವೃತ್ತ ನೌಕರರ ಸಂಘಟನೆ ಜತೆ ಚರ್ಚೆ ನಡೆಸಬೇಕು

* ವಿಶೇಷ ಭತ್ಯೆಯ ಮೇಲೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು

* ರಾಜೀನಾಮೆ ನೀಡಿದವರಿಗೂ ಪಿಂಚಣಿ ಸೌಲಭ್ಯ ವಿಸ್ತರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.