ತುಮಕೂರು: ಮೂರು ಬಾರಿ ಉದ್ಘಾಟನೆ ಕಂಡ ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಸ್‌ಗಳ ಓಡಾಟಕ್ಕೂ ಮುನ್ನವೇ ಸೋರುತ್ತಿದ್ದು, ಜಿಲ್ಲೆಯ ಸಚಿವರು, ಶಾಸಕರು ತೊಟ್ಟಿಕ್ಕುತ್ತಿದ್ದ ಕಟ್ಟಡದಲ್ಲಿ ಬಸ್ ಸಂಚಾರಕ್ಕೆ ಶನಿವಾರ ಚಾಲನೆ ನೀಡಿದರು.
ಸ್ಮಾರ್ಟ್ ಸಿಟಿಯಿಂದ ₹135 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಕಾಮಗಾರಿ ನಡೆಯುತ್ತಿರುವ ಮಧ್ಯದಲ್ಲೇ ತರಾತುರಿಯಲ್ಲಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದು ಕಡೆ ಕಟ್ಟಡದ ಕೆಲಸಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಬಸ್‌ಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಐದು ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಾರಂಭದಲ್ಲಿ 2022ರ ವೇಳೆಗೆ ಮುಗಿಸುವ ಗುರಿ ನಿಗದಿ ಪಡಿಸಿದ್ದರು. ಕೋವಿಡ್ ಕಾರಣದಿಂದ ವಿಳಂಬವಾದ ಕೆಲಸ ಇಂದಿಗೂ ಮುಕ್ತಾಯವಾಗಿಲ್ಲ. ನೆಲ ಮಹಡಿ, ಮೊದಲ ಮಹಡಿಯನ್ನು ಮಾತ್ರ ಬಳಕೆಗೆ ನೀಡಲಾಗುತ್ತಿದೆ. ಉಳಿದ ಎರಡು ಮಹಡಿಗಳಲ್ಲಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿವೆ. ನೆಲ ಮಹಡಿಯ ಹಲವು ಕಡೆಗಳಲ್ಲಿ ಸೋರುತ್ತಿದ್ದು, ‘ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಬಸ್ ನಿಲ್ದಾಣ 4.39 ಎಕರೆ ವಿಸ್ತೀರ್ಣ ಹೊಂದಿದೆ. ಕ್ಯಾಂಟೀನ್, ಮಹಿಳೆಯರ ವಿಶ್ರಾಂತಿ ಕೊಠಡಿ, ಶೌಚಾಲಯ, ಕುಡಿಯುವ ನೀರು, ಲಿಫ್ಟ್, ಎಸ್ಕಲೇಟರ್ ವ್ಯವಸ್ಥೆ ಇದೆ. ನೆಲ ಮಹಡಿ ಸೇರಿದಂತೆ ನಾಲ್ಕು ಮಹಡಿಗಳಲ್ಲಿ ವ್ಯಾಪಾರಸ್ಥರ ಪ್ರವೇಶ ಎಂದು ಗುರುತಿಸಲಾಗಿದೆ. ಅಂಗಡಿ ಮಳಿಗೆಗೆ ಅವಕಾಶ ನೀಡಲಾಗಿದೆ.
‘ಬಸ್‌ಗಳ ಸಂಚಾರ ಆರಂಭಕ್ಕೂ ಮೊದಲೇ ಸೋರುತ್ತಿರುವ ನಿಲ್ದಾಣವು ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿದೆ. ಸ್ಮಾರ್ಟ್ ಸಿಟಿಯ ಹಲವು ಕೆಲಸಗಳು ಗುಣಮಟ್ಟದಿಂದ ಕೂಡಿಲ್ಲ. ಉದ್ಘಾಟಿಸಿದ ಕೆಲವೇ ದಿನಗಳಿಗೆ ಹಾಳಾಗುತ್ತಿವೆ. ಮುಂದಿನ ದಿನಗಳಲ್ಲಿ ಮಳೆ ನೀರಿನ ಮಧ್ಯೆ ಬಸ್‌ಗಳು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದು ನಗರದ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.
ಆಟೊಕ್ಕಿಲ್ಲ ಅವಕಾಶ: ನೂತನ ಬಸ್ ನಿಲ್ದಾಣದ ಬಳಿ ಆಟೊ ನಿಲ್ದಾಣಕ್ಕೆ ಅವಕಾಶ ಕಲ್ಪಿಸಿಲ್ಲ. ನಿತ್ಯ ಸಾವಿರಾರು ಜನರು ಓಡಾಡುವ ನಿಲ್ದಾಣದಲ್ಲಿ ಆಟೊಗಳಿಗೆ ಅವಕಾಶ ನೀಡದಿದ್ದರೆ ಹೇಗೆ? ನಗರದಲ್ಲಿ 10 ಸಾವಿರ ಆಟೊಗಳಿವೆ, ಚಾಲಕರಿಗೆ ಸರ್ಕಾರ ನೆರವು ನೀಡಬೇಕು ಎಂದು ಆಟೊ ಚಾಲಕರ ಸಂಘದ ಪ್ರತಾಪ್ ಮದಕರಿ ಒತ್ತಾಯಿಸಿದರು.
ಸಮಸ್ಯೆ ಸರಿಪಡಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ ನಂತರ ಸಣ್ಣಪುಟ್ಟ ಕೆಲಸ ಬಾಕಿ ಇತ್ತು. ಇದೇ ಕಾರಣಕ್ಕೆ ಬಸ್‌ಗಳ ಸಂಚಾರ ವಿಳಂಬವಾಗಿದೆ. ಕಟ್ಟಡದ ಸೋರುವುದನ್ನು ತಡೆಯಲಾಗಿದೆ. ಏನಾದರೂ ಸಮಸ್ಯೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.