ತುಮಕೂರು: ರೈತರೊಬ್ಬರ ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿ.ಸಿ) ಅಳವಡಿಸಲು 12 ವರ್ಷಗಳ ಕಾಲ ಸತಾಯಿಸಿದ ಬೆಸ್ಕಾಂ ಶಿರಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ (ಎಇಇ) ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಹುಂಜನಾಳ ಗ್ರಾಮದಲ್ಲಿರುವ ರೈತ ಶಂಕರಪ್ಪ ಅವರ ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ಸೇವಾ ಲೋಪಕ್ಕಾಗಿ ₹10 ಸಾವಿರ ಹಾಗೂ ನ್ಯಾಯಾಲಯದ ವೆಚ್ಚವಾಗಿ ₹6 ಸಾವಿರ ಸೇರಿ ಒಟ್ಟು 16 ಸಾವಿರ ದಂಡ ಪಾವತಿಸುವಂತೆ ಆದೇಶಿಸಲಾಗಿದೆ.
ಪ್ರಕರಣದ ವಿವರ: ಶಿರಾ ತಾಲ್ಲೂಕು ಬೈರೇನಹಳ್ಳಿ ಗ್ರಾಮದ ಜವನಮ್ಮ ಎಂಬುವರು ಹುಂಜನಾಳ ಗ್ರಾಮದಲ್ಲಿ ಜಮೀನು ಹೊಂದಿದ್ದರು. ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಕ್ರಮ– ಸಕ್ರಮ ಯೋಜನೆಯನ್ನು ಬೆಸ್ಕಾಂ ಜಾರಿ ಮಾಡಿತ್ತು. ಅದರಂತೆ ಜವನಮ್ಮ ಟ್ರಾನ್ಸ್‌ಫಾರ್ಮರ್‌ಗಾಗಿ ಅರ್ಜಿ ಸಲ್ಲಿಸಿ, ಬೆಸ್ಕಾಂ ಜತೆಗೆ 2012 ಜನವರಿ 18ರಂದು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ ₹13,030 ಹಣವನ್ನು ಬೆಸ್ಕಾಂಗೆ ಪಾವತಿ ಮಾಡಿದ್ದರು. ಆದರೂ ಟ್ರಾನ್ಸ್‌ಫಾರ್ಮರ್ ಅವಳವಡಿಸಲಿಲ್ಲ.
ಕೋವಿಡ್ ಸಮಯದಲ್ಲಿ (2020ರಲ್ಲಿ) ಜವನಮ್ಮ ನಿಧನ ಹೊಂದಿದರು. ತಾಯಿ ನಿಧನದ ನಂತರ ಅವರ ಪುತ್ರ ಶಂಕರಪ್ಪ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಕೋರಿ ಮತ್ತೆ ಬೆಸ್ಕಾಂಗೆ ಮನವಿ ಸಲ್ಲಿಸಿದರು. ಸಾಕಷ್ಟು ಬಾರಿ ಮನವಿ ಮಾಡಿದರೂ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ. ಇದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗದೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ₹2 ಲಕ್ಷ ಪರಿಹಾರ ಕೊಡಿಸಬೇಕು ಎಂದು ಕೋರಿ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು.
ವಿಚಾರಣೆ ನಡೆಸಿದ ಆಯೋಗವು ಶಿರಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ನೋಟಿಸ್ ಜಾರಿ ಮಾಡಿತ್ತು. ಸಮರ್ಪಕವಾಗಿ ವಿವರಣೆ ನೀಡುವಲ್ಲಿ ಎಂಜಿನಿಯರ್ ವಿಫಲವಾಗಿರುವುದನ್ನು ಆಯೋಗ ವಿಚಾರಣೆ ಸಮಯದಲ್ಲಿ ಗಮನಿಸಿದೆ. ಸೇವಾ ನ್ಯೂನತೆ ಕಂಡು ಬಂದಿರುವುದರಿಂದ ಟಿ.ಸಿ ಅಳವಡಿಸಿ, ₹16 ಸಾವಿರ ಪರಿಹಾರ ನೀಡುವಂತೆ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.