ತುರುವೇಕೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೇಶ ವ್ಯಾಪಿ ಸೋಮವಾರ ನಡೆಸುತ್ತಿರುವ ಭಾರತ್ ಬಂದ್‌ಗೆ ತಾಲ್ಲೂಕಿನ ವಿವಿಧ ರೈತಪರ ಸಂಘಟನೆಗಳು ಸಾಥ್ ನೀಡಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆಯೇ ರೈತ ಪರ ಸಂಘಟನೆಗಳು ಬಾಣಸಂದ್ರ-ಮಾಯಸಂದ್ರ ವೃತ್ತದಲ್ಲಿ ಜಮಾಯಿಸಿದರು. ನಂತರ ನೂರಾರು ಪದಾಧಿಕಾರಿಗಳು ಮತ್ತು ರೈತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂ ಪಾಷಾ, ‘ರೈತರಿಗೆ ಮೂಲ ಸೌಲಭ್ಯ ಹಾಗೂ ರೈತಪರವಾದ ಯೋಜನೆಗಳ ಜಾರಿ ಎಂಬುದು ಮರೀಚಿಕೆಯಾಗಿದೆ. ರಾಜಕಾರಣಿಗಳು ರೈತರನ್ನು ಮತಯಂತ್ರಗಳಂತೆ ನೋಡುತ್ತಿದ್ದಾರೆ ಎಂದರು.
ರೈತರು ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅವರು ಯಾವುದೇ ಕಾರಣಕ್ಕೂ ಸ್ವಾಭಿಮಾನ ಅಡ ಇಡದೇ ಹೋರಾಟ ಚುರುಕುಗೊಳಿಸಲಿದ್ದಾರೆ. ಇಂತಹ ಒಗ್ಗಟ್ಟನ್ನು ಒಡೆಯುವ ತಂತ್ರಕ್ಕೆ ವ್ಯವಸ್ಥೆ ಮುಂದಾಗಿದೆ ಎಂದು ಖಂಡಿಸಿದರು.
ರೈತರನ್ನು ದಿವಾಳಿ ಮಾಡುತ್ತಿರುವ ಸರ್ಕಾರಕ್ಕೆ ತಕ್ಕ ಬುದ್ಧಿ ಕಲಿಸಬೇಕು. ಆ ನಿಟ್ಟಿನಲ್ಲಿ ರೈತ ಸಂಘ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಸಂಘಟನೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿತನದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ಕೃಷಿ ಕಾಯ್ದೆಗಳನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಸತೀಶ್, ಆಟೊ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್, ದಸಂಸ ಸಂಚಾಲಕ ದಂಡಿನಶಿವರ ಕುಮಾರ್, ವೇಣುಗೋಪಾಲ್, ಸ್ವರ್ಣಕುಮಾರ್, ಮಾರುತಿ, ರಾಮಯ್ಯ, ವೆಂಕಟೇಶ್, ಮಂಜುನಾಥ್, ಜಾಫರ್, ಚಂದ್ರಯ್ಯ, ಟಿ.ಜೆ. ಉಮೇಶ್, ಬಾಬು, ಆಶಾ, ಶಾಂತಮ್ಮ, ಪ್ರಕಾಶ್, ರಹಮತ್ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.