ADVERTISEMENT

ತುಮಕೂರು: ಕೃಷಿ ಕಾಯ್ದೆಗೆ ವಿರೋಧ, ಜನರಿಗೆ ತಟ್ಟದ ಬಂದ್‌ ಬಿಸಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:27 IST
Last Updated 28 ಸೆಪ್ಟೆಂಬರ್ 2021, 3:27 IST
ತುಮಕೂರು ಬಿಜಿಎಸ್ ವೃತ್ತದಲ್ಲಿ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಎ. ಗೋವಿಂದರಾಜು, ಸಿ. ಯತಿರಾಜು, ಆನಂದ್ ಪಟೇಲ್, ಸೈಯದ್ ಮುಜೀಬ್, ಗಿರೀಶ್, ಉಮೇಶ್, ಅಜ್ಜಪ್ಪ, ರಾಮಯ್ಯ ಇದ್ದರು
ತುಮಕೂರು ಬಿಜಿಎಸ್ ವೃತ್ತದಲ್ಲಿ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಎ. ಗೋವಿಂದರಾಜು, ಸಿ. ಯತಿರಾಜು, ಆನಂದ್ ಪಟೇಲ್, ಸೈಯದ್ ಮುಜೀಬ್, ಗಿರೀಶ್, ಉಮೇಶ್, ಅಜ್ಜಪ್ಪ, ರಾಮಯ್ಯ ಇದ್ದರು   

ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಬಂದ್‌ಗೆ ವಿವಿಧ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ, ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

ಬಸ್, ಆಟೊ, ಟ್ಯಾಕ್ಸಿ ಸಂಚಾರ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು.ಜನಜೀವನ ಸಾಮಾನ್ಯವಾಗಿತ್ತು. ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಲಿಲ್ಲ. ರೈತ ಸಂಘಟನೆ, ರೈತ ಮುಖಂಡರು, ಸಿಪಿಎಂ, ಸಿಪಿಐ, ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ನಾಲ್ಕು ದಿಕ್ಕಿನಿಂದ ಮೆರವಣಿಗೆ ನಗರಕ್ಕೆ ಬಂತು. ಮರಳೂರು ಕೆರೆ ರಿಂಗ್ ರಸ್ತೆ, ಗುಬ್ಬಿ ಗೇಟ್ ರಿಂಗ್ ರಸ್ತೆಯಿಂದ ರೈತ ಸಂಘದ ಎ. ಗೊವಿಂದರಾಜು, ಆನಂದ ಪಟೇಲ್ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಶಂಕರಪ್ಪ, ಪ್ರಗತಿಪರ ಸಂಘಟನೆಯ ತಾಜ್ ಉದ್ದೀನ್ ನೇತೃತ್ವದಲ್ಲಿ; ಶಿರಾ ಗೇಟ್ ವೃತ್ತದಿಂದ ಪ್ರಾಂತ್ಯ ರೈತ ಸಂಘದ ಕರಿಬಸವಯ್ಯ, ಕಾರ್ಮಿಕ ಮುಖಂಡರಾದ ಗಿರೀಶ್, ಲೋಕೇಶ್, ಷಣ್ಮುಖಪ್ಪ, ಖಲೀಲ್; ಬಟವಾಡಿ ವೃತ್ತದಿಂದ ಪ್ರಾಂತ ರೈತ ಸಂಘದ ಸ್ವಾಮಿ, ಎಐಕೆಎಸ್ ಕಂಬೇಗೌಡ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎ.ನರಸಿಂಹಮೂರ್ತಿ, ಕಾರ್ಮಿಕ ಸಂಘಟನೆಯ ಮಂಜುಳಾ ನೇತೃತ್ವದ ತಂಡ ಮೆರವಣಿಗೆ ಆರಂಭಿಸಿತು.

ADVERTISEMENT

ಪ್ರತಿಭಟನಾ ಮೆರವಣಿಗೆ ನಗರದ ಹೃದಯ ಭಾಗವಾದ ಬಿಜಿಎಸ್ ವೃತ್ತಕ್ಕೆ ಬಂತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ನಗರದ ಬಿ.ಎಚ್. ರಸ್ತೆ, ಅಶೋಕ ರಸ್ತೆ, ಎಂ.ಜಿ. ರಸ್ತೆ, ಮಂಡಿಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ದೇಶದಲ್ಲಿ ಶೇ 70ರಷ್ಟು ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಲಜ್ಜೆಗೆಟ್ಟ ಕೇಂದ್ರ ಸರ್ಕಾರವು ರೈತರು, ಕೃಷಿ ಭೂಮಿಯನ್ನು ನಾಶ ಮಾಡುತ್ತಿದೆ. ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸಮಸ್ಯೆ ಪರಿಹರಿಸದೆ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ ಬೆಲೆ ದುಬಾರಿಯಾಗಿದೆ. ಜನಸಾಮಾನ್ಯರು ಬದುಕು ನಡೆಸದಂತಹ ಪರಿಸ್ಥಿತಿ ನಿರ್ಮಿಸಿದೆ. ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ ಜಾರಿಗೆ ತಂದು ರೈತರಿಂದ ಭೂಮಿ ಕಿತ್ತುಕೊಂಡು ಕಾರ್ಪೋರೇಟ್ ಸಂಸ್ಥೆಗಳಿಗೆ ಕೊಡಲು ಮುಂದಾಗಿದೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿ ವಿದ್ಯುತ್ ದರವನ್ನು ಮತ್ತಷ್ಟು ಹೆಚ್ಚಿಸಲಿದೆ. ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ಕಾರ್ಯಕ್ಕೂ ಮುಂದಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕ ಸಿ. ಯತಿರಾಜು, ‘ರೈತ ವಿರೋಧಿಯಾಗಿರುವ 3 ಕೃಷಿ ಕಾಯ್ದೆಯನ್ನು ವಾಪಸ್ ಪಡೆಯ ಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಬಾರದು. ಬೆಲೆ ಏರಿಕೆ ನಿಯಂತ್ರಿಸಬೇಕು. ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರ ಆದಾಯ ಕುಸಿ ಯುತ್ತಿದೆ. ಇದರಿಂದ ಜನ ಸಾಮಾನ್ಯರು ಬದುಕುವುದೇ ಕಷ್ಟಕರವಾಗಿದೆ’ ಎಂದು ಆರೋಪಿಸಿದರು.

ಸಿಐಟಿಯು ಮುಖಂಡ ಸೈಯದ್ ಮುಜೀಬ್, ‘ಎಐಟಿಯುಸಿ, ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳು ರೈತರ ಹೋರಾಟಕ್ಕೆ ಕೈ ಜೋಡಿಸಿವೆ. ಕೇಂದ್ರ ಸರ್ಕಾರ ರೈತರು, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದನ್ನೇ ಮರೆತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್, ‘ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಲ್ಲಾಳಿಗಳ ರೀತಿಯಲ್ಲಿ ಕೇಂದ್ರ ನಡೆದುಕೊಳ್ಳುತ್ತಿದೆ’ ಎಂದು ಟೀಕಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜು, ರವೀಶ್, ಉಮೇಶ್, ಎನ್.ಕೆ. ಸುಬ್ರಹ್ಮಣ್ಯ, ಗಿರೀಶ್, ಅಜ್ಜಪ್ಪ, ಪಂಡಿತ್ ಜವಾಹರ್, ಚಿರತೆ ಚಿಕ್ಕಣ್ಣ, ಪಿ.ಎನ್. ರಾಮಯ್ಯ, ನರಸಿಂಹಮೂರ್ತಿ ಸೇರಿದಂತೆ ವಿವಿಧ 47 ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.