ADVERTISEMENT

ರೈತರಿಗೇ ಸಹಾಯಧನ ನೀಡಲು ಆಗ್ರಹ

ಭಾರತೀಯ ಕೃಷಿಕ ಸಮಾಜದ ತುಮಕೂರು ಜಿಲ್ಲಾ ಘಟಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 9:32 IST
Last Updated 4 ಮಾರ್ಚ್ 2020, 9:32 IST
ಕೋಡಿಹಳ್ಳಿ ಜಗದೀಶ್‌
ಕೋಡಿಹಳ್ಳಿ ಜಗದೀಶ್‌   

ತುಮಕೂರು: ಕೃಷಿ ಯಂತ್ರೋಪಕರಣಗಳನ್ನು ಮಾರುಕಟ್ಟೆ ಬೆಲೆಗಿಂತ ದುಬಾರಿ ದರಕ್ಕೆ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೋಡಿಹಳ್ಳಿ ಜಗದೀಶ್‌ ಮಂಗಳವಾರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ‘ಉಳುಮೆ ಮಾಡುವ ಗುಣಮಟ್ಟದ ರೋಟವೇಟರ್‌ ಯಂತ್ರ ಮಾರುಕಟ್ಟೆಯಲ್ಲಿ ₹ 60 ಸಾವಿರಕ್ಕೆ ಲಭ್ಯವಿದೆ. ಆದರೆ, ಇಲಾಖೆಯು ರೈತರಿಂದ ₹60 ಸಾವಿರ ಕಟ್ಟಿಸಿಕೊಂಡು ₹50 ಸಾವಿರ ಸಹಾಯಧನ ನೀಡಿ, ಯಂತ್ರಗಳನ್ನು ಖರೀದಿಸಿ, ನೀಡುತ್ತಿದೆ. ಇದರಿಂದ ಯಂತ್ರೋಪಕರಣಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ’ ಎಂದು ಅವರು ದೂರಿದರು.

ಈ ಹಿಂದೆ ಸಹಾಯಧನವನ್ನು ರೈತರ ಖಾತೆಗೆ ಜಮೆ ಮಾಡಲಾಗುತಿತ್ತು. ಇದರಿಂದ ಯಂತ್ರೋಪಕರಣ ಕಂಪನಿಯ ಪ್ರತಿನಿಧಿಗಳೊಂದಿಗೆ ಚೌಕಾಸಿ ಮಾಡಿ, ಆದಷ್ಟು ಕಡಿಮೆ ಬೆಲೆಗೆ ಕೃಷಿ ಉಪಕರಣಗಳನ್ನು ಖರೀದಿ ಮಾಡಬಹುದಿತ್ತು. ಆದರೆ, ಈಗ ಕಂಪನಿಯ ಖಾತೆಗಳಿಗೆ ನೇರವಾಗಿ ಸಹಾಯಧನ ವರ್ಗಾವಣೆ ಆಗುತ್ತಿದೆ. ಇದರಿಂದ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಲು ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿದರು.

ADVERTISEMENT

ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿರುವ ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸಬೇಕು. ಕೊಳಚೆ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಹರಿಸಬೇಕು. ನಾಲೆ ನೀರನ್ನು ಕೈಗಾರಿಕೆಗಳಿಗೆ ಸರಬರಾಜು ಮಾಡಬಾರದು ಎಂದು ಆಗ್ರಹಿಸಿದರು.

ಕೃಷಿಕ ಸಮಾಜ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಪುಟ್ಟರಾಜು ಬ್ರಹ್ಮಸಂದ್ರ ಮಾತನಾಡಿ, ‘ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಕೃಷಿ ಇಲಾಖೆಯು ಅನುವುಗಾರರನ್ನು ನೇಮಿಸಬೇಕು. ಅವರಿಂದ ಸುಧಾರಿತ ಕೃಷಿ ಕುರಿತು ಸಲಹೆಗಳನ್ನು ಪಡೆಯಲು ಅನುಕೂಲ ಆಗುತ್ತದೆ’ ಎಂದು ಹೇಳಿದರು.

ಕೃಷಿಕ ಸಮಾಜದ ಒತ್ತಾಯಗಳು

* ಕೃಷಿ ಉತ್ಪನ್ನಗಳನ್ನು ಎಪಿಎಂಸಿಗಳಿಗೆ ತರಲು ಸಾಗಣೆ ವೆಚ್ಚ ಕೊಡಬೇಕು

*ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಬಳಸಿಕೊಳ್ಳದ ಜಮೀನನ್ನು ಕೃಷಿಗಾಗಿ ವಾಪಸ್ ನೀಡಬೇಕು

*ಕಳಪೆ ಬೀಜ, ರಸಗೊಬ್ಬರ, ಕೀಟ ನಾಶಕ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು

*ನೈಸರ್ಗಿಕವಾಗಿ ಕೊಬ್ಬರಿಗಳನ್ನು ತಯಾರಿಸಲು ಬೇಕಾದ ಗೋದಾಮುಗಳ ನಿರ್ಮಾಣಕ್ಕೆ ಸಹಾಯಧನ ನೀಡಬೇಕು

*ಕೇಂದ್ರ ಸರ್ಕಾರ ಬೀಜ ಮಸೂದೆ–2019 ಅನ್ನು ಕಾಯ್ದೆಯಾಗಿ ರೂಪಿಸಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.