ADVERTISEMENT

ಬೀಡಿ ಕಾರ್ಮಿಕರಿಗೆ ₹6 ಸಾವಿರ ಭತ್ಯೆಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 4:13 IST
Last Updated 11 ಜೂನ್ 2020, 4:13 IST

ತುಮಕೂರು: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಬೀಡಿ ಕಾರ್ಮಿಕರ ಕುಟುಂಬಗಳ ನಿರ್ವಹಣೆಗೆ ಮಾಲೀಕರು ಮತ್ತು ಸರ್ಕಾರ ಜಂಟಿಯಾಗಿ ₹ 6 ಸಾವಿರ ತಿಂಗಳ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಒಂದು ಲಕ್ಷ ಬೀಡಿ ಕಾರ್ಮಿಕರಿದ್ದು ಇದೀಗ ತೊಂದರೆ ಅನುಭವಿಸುವಂತಹ ಸ್ಥಿತಿ ಬಂದಿದೆ. ಇವರಲ್ಲಿ ಸಂಸಾರದ ನಿರ್ವಹಣೆ ಜವಾಬ್ದಾರಿ ಹೊತ್ತ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇದ್ದಾರೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ತಿಳಿಸಿದರು.

ಬೀಡಿ ಗುತ್ತಿಗೆದಾರರು, ಏಜೆಂಟರಿಂದ ಬೀಡಿಎಲೆ, ತಂಬಾಕು ಪಡೆದು ಮನೆಗಳಲ್ಲಿ ಬೀಡಿ ಸುತ್ತಿ ಗುತ್ತಿಗೆದಾರ, ಏಜೆಂಟರಿಗೆ ನೀಡಿ ಕೂಲಿ ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಲಾಕ್‍ಡೌನ್‍ನಿಂದ ಎರಡು ತಿಂಗಳಿಂದ ಕೂಲಿಯೂ ಸಿಕ್ಕಿಲ್ಲ. ಸರ್ಕಾರ ಇತರೆ ಕಾರ್ಮಿಕರಂತೆ ಬೀಡಿಕಾರ್ಮಿಕರಿಗೂ ಲಾಕ್‍ಡೌನ್ ಅವಧಿಯ ವೇತನ ನೀಡಬೇಕು ಎಂದು ಬೀಡಿ ಮಾಲೀಕರಿಗೆ ಆದೇಶಿಸಬೇಕು. ಕಾರ್ಮಿಕರಿಗೆ ಬಾಕಿ ಇರುವ ತುಟ್ಟಿಭತ್ಯೆ ನೀಡಬೇಕು ಎಂದರು.

ADVERTISEMENT

ಈಗಾಗಲೇ ಕಟ್ಟಿರುವ ಬೀಡಿಗಳು ಹಾಳಾಗಿವೆ. ಅವುಗಳ ನಷ್ಟವನ್ನು ವಸೂಲಿ ಮಾಡಬಾರದು. ಬೀಡಿ ಕಾರ್ಮಿಕರು ಹಸಿವಿನಿಂದ ಬಳಲಿ ಸಾಯದಂತೆ ಕ್ರಮ ವಹಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬೀಡಿ ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಒಳಗೊಂಡಂತೆ ಅಧಿಕಾರಿಗಳ ಮೇಲುಸ್ತುವಾರಿ ಸಮಿತಿ ರಚಿಸಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಆಗ್ರಹಿಸಿದರು.

ಶಿರಾ ತಾಲ್ಲೂಕಿನಲ್ಲಿ ಬೀಡಿ ಉದ್ದಿಮೆದಾರರು, ಕಾರ್ಮಿಕರ ಮೇಲೆ ಪೊಲೀಸರು ಹಾಗೂ ಇತರೆ ಇಲಾಖೆ ಅಧಿಕಾರಿಗಳು ನಡೆಸುವ ಅನಗತ್ಯ ದಾಳಿಗಳನ್ನು ನಿಲ್ಲಿಸಬೇಕು. ಬೀಡಿ ಉದ್ಯಮವನ್ನು ನಂಬಿರುವ ಕುಟುಂಬಗಳಿಗೆ ಪರ್ಯಾಯ ನೀಡದೆ ತಂಬಾಕು ನಿಷೇಧ ಮಾಡಬಾರದು ಎಂದು ಒತ್ತಾಯಿಸಿದರು.

ಸಿಐಟಿಯು ಮುಖಂಡರಾದ ಶಹತಾಜ್, ಇಂತಿಯಾಜ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.