ADVERTISEMENT

ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ: ₹80 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:55 IST
Last Updated 13 ಜುಲೈ 2025, 4:55 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರು ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ತ್ವರಿತವಾಗಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಒಡ್ಡಿದ ಆಮಿಷಕ್ಕೆ ಒಳಗಾದ ಇಲ್ಲಿಯ ನಿವಾಸಿಯೊಬ್ಬರು ₹79.75 ಲಕ್ಷ ಕಳೆದುಕೊಂಡಿದ್ದಾರೆ.  

ನಗರದ ಕೆ.ಆರ್‌. ಬಡಾವಣೆಯ ಪಿ.ಕಿಶೋರ್‌ ಕುಮಾರ್‌ ಹಣ ಕಳೆದುಕೊಂಡ ವ್ಯಕ್ತಿ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಜಿಯಾ ಶರ್ಮಾ ಬಿಟ್‌ ಕಾಯಿನ್‌ ಹೂಡಿಕೆ ಮಾಡಿದರೆ ವೇಗವಾಗಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ.

ನಂತರ ವಾಟ್ಸ್‌ ಆ್ಯಪ್‌ನಲ್ಲಿ ‘Coinex’ ಎಂಬ ಆ್ಯಪ್‌ ಲಿಂಕ್‌ ಕಳುಹಿಸಿದ್ದಾರೆ. ವಂಚಕರು ಸೂಚಿಸಿದಂತೆ ಕಿಶೋರ್‌ ಹಣ ಹೂಡಿಕೆ ಮಾಡಿದ್ದಾರೆ. ಮೇ 23ರಿಂದ ಜುಲೈ 2ರ ವರೆಗೆ ಹಂತ ಹಂತವಾಗಿ ಒಟ್ಟು ₹79.75 ಲಕ್ಷವನ್ನು ಜಿಯಾ ಶರ್ಮಾ ಎಂಬುವರು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ADVERTISEMENT

ಜುಲೈ 3ರಂದು ಹೂಡಿಕೆ ಮಾಡಿದ ಹಣ ವಾಪಸ್‌ ಕೇಳಿದ್ದಾರೆ. ₹58 ಲಕ್ಷ ತೆರಿಗೆ ಹಣ ವರ್ಗಾವಣೆ ಮಾಡಿದರೆ ಮಾತ್ರ ಎಲ್ಲ ಹಣ ವಾಪಸ್‌ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸೈಬರ್‌ ಠಾಣೆಗೆ ಕಿಶೋರ್‌ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.