ADVERTISEMENT

ಸರ್ಕಾರದಿಂದ ರಾಜಕೀಯ ಪ್ರತೀಕಾರ: ಬಿಜೆಪಿ ಪ್ರತಿಭಟನೆ

ಗೃಹ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:47 IST
Last Updated 6 ಮೇ 2019, 13:47 IST
ಪ್ರತಿಭಟನೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜ್ ಮಾತನಾಡಿದರು.   

ತುಮಕೂರು: ಗೃಹ ಸಚಿವ ಎಂ.ಬಿ.ಪಾಟೀಲ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಬಿಜೆಪಿ ವಿರುದ್ಧ ರಾಜಕೀಯ ಪ್ರತೀಕಾರ ಕೈಗೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

ಕೆಲವು ತಿಂಗಳಿಂದ ಸಮ್ಮಿಶ್ರ ಸರ್ಕಾರವು ಮಾಧ್ಯಮ ಸೇರಿದಂತೆ ರಾಜ್ಯದ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅನೇಕ ಪ್ರಸಂಗಗಳಲ್ಲಿ ಬಿಜೆಪಿಯು ತನ್ನ ವಿರುದ್ಧ ನಡೆಯುತ್ತಿರುವ ಸೇಡಿನ ಕ್ರಮಗಳ ವಿರುದ್ಧ ದೂರುಗಳನ್ನು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವಂತೆ ಕರೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಬಿಜೆಪಿ ದೂರು ನೀಡಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜೆಡಿಎಸ್ ಶಾಸಕ ನಾರಾಯಣಗೌಡ ನಟರಾದ ಯಶ್ ಮತ್ತು ದರ್ಶನ್ ಅವರಿಗೆ ನೇರವಾಗಿ ಬೆದರಿಕೆ ಹಾಕಿದ್ದರು. ಈ ಎರಡೂ ಪ್ರಕರಣಗಳಲ್ಲಿ ಸಾಮಾಜಿಕ ಸಾಮರಸ್ಯ ಕೆಡಿಸುವಂತಹ ಗಂಭೀರ ಅಪಾಯವಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಪಕ್ಷಪಾತ ಧೋರಣೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರ ಮತ್ತು ಮಂತ್ರಿಗಳನ್ನು ಟೀಕಿಸುವುದೇ ಅಪರಾಧ ಎನ್ನುವಂತಾಗಿದೆ. ಟೀಕಿಸಿದ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಭಯದ ವಾತಾವರಣ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಕರಾಳ ನೆನಪು ಮರುಕಳಿಸುವಂತಹ ಹಲವು ಪ್ರಕರಣಗಳು ನಡೆದಿವೆ.

ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಜೈಲಿಗೆ ಕಳುಹಿಸಲು ಗೃಹ ಸಚಿವರೇ ವಿಶೇಷ ಆಸಕ್ತಿ ವಹಿಸಿದ್ದಾರೆ. ಮಹೇಶ್ ವಿಕ್ರಮ್ ಹೆಗಡೆ, ಶ್ರುತಿ ಬೆಳ್ಳಕ್ಕಿ, ಶಾರದಾ ಡೈಮಂಡ್, ಹೇಮಂತ್‌ ಕುಮಾರ್ ಮತ್ತು ಅಜಿತ್ ಶೆಟ್ಟಿ ಹೇರಂಜಿ ಅವರ ಮೇಲೆ ನಿರಾಧಾರ ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಕಿರುಕಳ ನೀಡಲಾಗಿದೆ. ಇವರೆಲ್ಲರೂ ಬಿಜೆಪಿ ಬಗ್ಗೆ ಅಭಿಮಾನ ಹೊಂದಿದವರು. ಅದೇ ಕಾರಣಕ್ಕೆ ಅಭಿವ್ಯಕ್ತಿ ಸ್ವಾತ್ರಂತ್ರ್ಯವನ್ನು ಹತ್ತಿಕ್ಕಿ ಇವರ ವಿರುದ್ಧ ಸೇಡಿನ ಕ್ರಮ ಜರುಗಿಸಲಾಗಿದೆ ಎಂದು ದೂರಿದರು.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಸಂಸದ ಜಿ.ಎಸ್. ಬಸವರಾಜ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ಬ್ಯಾಟರಂಗೇಗೌಡ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್, ಬಿಜೆಪಿ ನಗರ ಉಪಾಧ್ಯಕ್ಷ ಇಂದ್ರಕುಮಾರ್, ಕೊಪ್ಪಳ್ ನಾಗರಾಜ್, ವೇದಮೂರ್ತಿ, ರಾಮಚಂದ್ರಪ್ಪ, ಹನುಮಂತರಾಯಪ್ಪ, ರಾಜಣ್ಣ, ಆರ್.ಕೆ. ಶ್ರೀನಿವಾಸ್, ನಂಜುಂಡ ಸ್ವಾಮಿ, ಮೋಹನ್ ಬಂಬೂ, ಬಂಡೇಪಾಳ್ಯ ಶಿವಕುಮಾರ್, ಪ್ರಸಾದ್, ಶಂಕರ್ ಉಪ್ಪಾರಹಳ್ಳಿ, ಸಿದ್ದರಾಜುಗೌಡ, ರಕ್ಷಿತ್, ಶ್ರೀನಿಧಿ ರಾಜಣ್ಣ, ಮೂರ್ತಿ, ಜ್ಯೋತಿ ತಿಪ್ಪೇಸ್ವಾಮಿ, ಶೋಭಾ, ಸ್ವರ್ಣ, ಅಣೆತೋಟ ಶ್ರೀನಿವಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.