ADVERTISEMENT

ಹೇಡಿತನ ಪ್ರದರ್ಶಿಸಿದ ಬಿಜೆಪಿ: ಕಾಂಗ್ರೆಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 14:27 IST
Last Updated 24 ಮಾರ್ಚ್ 2023, 14:27 IST
ಎಸ್.ರಫಿಕ್ ಅಹ್ಮದ್
ಎಸ್.ರಫಿಕ್ ಅಹ್ಮದ್   

ತುಮಕೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಉತ್ತರಿಸಲಾಗದೆ ಬಿಜೆಪಿ ಸರ್ಕಾರವು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ಮೂಲಕ ಉತ್ತರ ಕುಮಾರನ ರೀತಿ ಹೇಡಿತನ ಪ್ರದರ್ಶಿಸಿದೆ ಎಂದು ಪಕ್ಷದ ಮುಖಂಡ ಎಸ್.ರಫಿಕ್ ಅಹ್ಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ್ ಜೋಡೊ ಯಾತ್ರೆಯಿಂದ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯರಾಗಿದ್ದು, ಅವರ ನಾಯಕತ್ವದ ಬಗ್ಗೆ ದೇಶದ ಜನತೆ ಒಲವು ತೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಗ್ಗುತ್ತಿದ್ದು ಖಾಲಿ ಕುರ್ಚಿಗೆ ಭಾಷಣ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನರಿತ ಬಿಜೆಪಿ ಪಕ್ಷ ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಬಲ ಕುಗ್ಗಿಸಲು ಕುತಂತ್ರ ರೂಪಿಸಿ, ತನ್ನ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವ ಅಣಕಿಸಿ, ಅಘೋಷಿತ ಸರ್ವಾಧಿಕಾರ ಆಡಳಿತ ನಡೆಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಪ್ರಪಂಚದಲ್ಲೇ ಅತ್ಯಂತ ಉನ್ನತ ಹಾಗೂ ಮಾದರಿ ಪ್ರಜಾಪ್ರಭುತ್ವವನ್ನು ದೇಶ ಹೊಂದಿದೆ. ಅಂತಹ ವ್ಯವಸ್ಥೆಗೆ ಧಕ್ಕೆ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ದೂರಿದ್ದಾರೆ.

ADVERTISEMENT

ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ, ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಹೋರಾಟ: ರಾಹುಲ್ ಗಾಂಧಿ ಅವರ ಸತ್ಯವಾದ ಹೇಳಿಕೆಯನ್ನು ಸಹಿಸಲಾರದೆ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಹೇಡಿತನವನ್ನು ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ಎಸ್.ರವಿಕುಮಾರ್ ಟೀಕಿಸಿದ್ದಾರೆ.

ದೀಪ ಆರುವ ಮುನ್ನ ಜೋರಾಗಿ ಉರಿಯುವಂತೆ ಬಿಜೆಪಿ ಪಕ್ಷ ತನ್ನ ಅಂತ್ಯವನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಇಂತಹ ಬೆದರಿಕೆಗೆ ಭಯಪಟ್ಟು, ಕ್ಷಮೆ ಕೇಳುವುದಕ್ಕೆ, ನಾವು ಸಾವರ್ಕರ್ ಅನುಯಾಯಿಗಳಲ್ಲ. ಮಹಾತ್ಮಾ ಗಾಂಧಿ ಅನುಯಾಯಿಗಳು ಎಂದಿದ್ದಾರೆ.

ರಾಹುಲ್ ಗಾಂಧಿ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ, ಇಂತಹ ಅನ್ಯ ಮಾರ್ಗಗಳ ಮೂಲಕ ಕುಗ್ಗಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಸಂವಿಧಾನ ಉಳಿಸಲು ಬಿಜೆಪಿ ವಿರುದ್ಧ ಹೋರಾಟ ಮಾಡುವ ಸಂದರ್ಭ ಬಂದಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.