ತಿಪಟೂರು: ಬ್ರಾಹ್ಮಣ ಸಮುದಾಯದವರು ಆರ್ಥಿಕವಾಗಿ ಬಡವರಾಗಿರಬಹುದು. ಆದರೆ ವಿದ್ಯೆಯ ಮೂಲಕ ಗೌರವ, ಸ್ಥಾನಮಾನಗಳನ್ನು ಗಳಿಸಿದ್ದಾರೆ. ಬ್ರಾಹ್ಮಣರಿಗೆ ವಿದ್ಯೆಯೇ ನಿಜವಾದ ಆಸ್ತಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ತುಮಕೂರು ಜಿಲ್ಲಾ ಪ್ರತಿನಿಧಿ ಡಾ. ಹರೀಶ್ ಅಭಿಪ್ರಾಯಪಟ್ಟರು.
ತಾಲೂಕು ಬ್ರಾಹ್ಮಣ ಗೆಳೆಯರ ಬಳಗ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ವೇ ಜನ ಸುಖಿನೋ ಭವಂತು’ ಎಂಬ ಜೀವನ ಧ್ಯೇಯ ಅಳವಡಿಸಿಕೊಂಡಿರುವುದು ಬ್ರಾಹ್ಮಣ ಸಮುದಾಯದ ಶ್ರೇಷ್ಠತೆ ಎಂದರು.
ಸಮಾಜದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಸಮುದಾಯದ ಪ್ರತಿಯೊಬ್ಬರೂ ಪಡೆಯಬೇಕು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸಲು ಸಭೆ ಸಹಾಯ ಮಾಡುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ಉಪಾಧ್ಯಕ್ಷ ಸುದರ್ಶನಂ ಹೇಳಿದರು.
ವಿಪ್ರ ಸಮಾಜವು ಜೇನಗೂಡಿನಂತೆ ಸಹಕಾರ, ಸಹಬಾಳ್ವೆಯಿಂದ ಕಾರ್ಯನಿರ್ವಹಿಸಿದರೆ ತಾಲೂಕು ಮಟ್ಟದಿಂದಲೇ ಬಲಿಷ್ಠ ಸಮುದಾಯ ರೂಪಿಸಬಹುದು ಎಂದು ತುಮಕೂರು ಜಿಲ್ಲಾ ಬ್ರಾಹ್ಮಣ ಸಭೆಯ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಮುಂದಿನ ಪೀಳಿಗೆ ಉಳಿಯಬೇಕಾದರೆ ಎಲ್ಲ ಹಿರಿಯರೂ ಬ್ರಾಹ್ಮಣ್ಯ ಪಾಲಿಸಬೇಕು. ಸನಾತನ ಧರ್ಮ, ಸಂಸ್ಕೃತಿ ಉಳಿದರೆ ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಬಹುದು ಎಂದು ತಿಪಟೂರಿನ ಡಾ.ಶ್ರೀಧರ ಕಿವಿಮಾತು ಹೇಳಿದರು.
ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪಡೆದ ತಿಪಟೂರಿನ ಪ್ರಣವ್ ಬೆಳ್ಳೂರು, ಡಾಕ್ಟರೇಟ್ ಪದವಿ ಪುರಸ್ಕೃತರು ಹಾಗೂ ನಿಕಟಪೂರ್ವ ಸದಸ್ಯರನ್ನು ಸನ್ಮಾನಿಸಲಾಯಿತು.
ಗಾಯಕ ಶಶಿಧರ ಕೋಟೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಬ್ರಾಹ್ಮಣ ಗೆಳೆಯರ ಬಳಗದ ಅಧ್ಯಕ್ಷ ಬಿ.ಎಸ್. ಮೋಹನ್ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.