ತುಮಕೂರು: ತಾಲ್ಲೂಕಿನ ಕುರುವೇಲು ಬಳಿ ಬುಧವಾರ ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ನಾಲ್ವರು ದರೋಡೆಕೋರರು ಗೂಡ್ಸ್ ವಾಹನ ಚಾಲಕನಿಗೆ ಬೆದರಿಕೆ ಹಾಕಿ, ₹2.70 ಲಕ್ಷ ಮೌಲ್ಯದ ಚಿನ್ನಾಭರಣ, ₹30 ಸಾವಿರ ನಗದು ದೋಚಿದ್ದಾರೆ.
ಬೆಂಗಳೂರಿನ ಹೇರೋಹಳ್ಳಿ ಕ್ರಾಸ್‌ನ ಮಾದೇಶ್ವರ ನಗರದ ಮಹೇಂದ್ರಕುಮಾರ್ ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಪ್ಲೈವುಡ್‌ಗಳನ್ನು ಇಳಿಸಿ ವಾಪಸ್ ಹೋಗುವಾಗ ಘಟನೆ ನಡೆದಿದೆ. ಬೆಂಗಳೂರಿಗೆ ಹೋಗುವ ಮಧ್ಯೆ ಸುಸ್ತಾಗಿ ಕುರುವೇಲು ಹತ್ತಿರ ವಾಹನ ನಿಲ್ಲಿಸಿ ಮಲಗಿದ್ದರು. ಇದನ್ನು ಗಮನಿಸಿದ ದರೋಡೆಕೋರರು ವಾಹನದ ಗಾಜು ಒಡೆದು ಗಲಾಟೆ ಮಾಡಿದ್ದಾರೆ.
ಮೊಬೈಲ್ ಕೊಡದೆ ಇದ್ದಾಗ ಹಲ್ಲೆ ನಡೆಸಿದ್ದಾರೆ. ಮಹೇಂದ್ರ ಧರಿಸಿದ್ದ 2 ಬಂಗಾರದ ಉಂಗುರ, ಚಿನ್ನದ ಸರ, ಹಣ ಇದ್ದ ಪರ್ಸ್ ಕಿತ್ತುಕೊಂಡು ಮತ್ತೊಂದು ಗೂಡ್ಸ್ ವಾಹನದಲ್ಲಿ ಹೊರಟು ಹೋಗಿದ್ದಾರೆ. ಮಹೇಂದ್ರ 112 ಸಂಪರ್ಕಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.