
ತುಮಕೂರು: ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ವಿತರಣಾ ಕಾರ್ಯ ಜಿಲ್ಲೆಯಲ್ಲಿ ವಿಳಂಬವಾಗುತ್ತಿದ್ದು, ರಾಜ್ಯ ಸರ್ಕಾರ ಅನುಗ್ರಹ ಯೋಜನೆಯಡಿ ₹2.64 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ.
ಜಿಲ್ಲೆಯಲ್ಲಿ 2022ರ ಫೆಬ್ರುವರಿಯಿಂದ 2025ರ ಜುಲೈ 25ರ ವರೆಗೆ ಒಟ್ಟು 3,175 ರಾಸುಗಳು ಮೃತಪಟ್ಟಿದ್ದು, ಇದರಲ್ಲಿ 1,388 ಜಾನುವಾರು ಮಾಲೀಕರಿಗೆ ಪರಿಹಾರದ ಹಣ ತಲುಪಿಲ್ಲ. 1,787 ಜಾನುವಾರುಗಳಿಗೆ ₹1.76 ಕೋಟಿ ಪರಿಹಾರ ನೀಡಲಾಗಿದೆ. 2025ರ ಮೊದಲ ಆರು ತಿಂಗಳಲ್ಲಿ 1,259 ರಾಸುಗಳು ಆಕಸ್ಮಿಕವಾಗಿ ಜೀವ ಬಿಟ್ಟಿವೆ. ಕಳೆದ ನವೆಂಬರ್‌ನಿಂದ ಈವರೆಗೆ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಹೆಚ್ಚುಕಡಿಮೆ ಒಂದು ವರ್ಷದಿಂದ ಹಣ ಬಂದಿಲ್ಲ.
ಗಂಭೀರ ಕಾಯಿಲೆ, ವಿಪತ್ತು, ಅವಘಡ, ಹಾವು ಕಡಿತ ಸೇರಿ ಇತರೆ ಕಾಯಿಲೆಗೆ ತುತ್ತಾದ ಜಾನುವಾರುಗಳಿಗೆ ಪರಿಹಾರ ನೀಡಿ, ರೈತರಿಗೆ ನೆರವಾಗುವ ಉದ್ದೇಶದಿಂದ ಅನುಗ್ರಹ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಈ ಹಿಂದೆ ಮೃತಪಟ್ಟ, ಎಮ್ಮೆ, ಹೋರಿ, ಹಸು, ಎತ್ತುಗಳಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಈ ವರ್ಷದ ಏಪ್ರಿಲ್ ತಿಂಗಳಿನಿಂದ ₹15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪರಿಹಾರ ಹೆಚ್ಚಿಸಿದ ನಂತರ ಪಶು ಪಾಲಕರ ಖಾತೆಗೆ ಹಣ ಜಮೆ ಆಗಿಲ್ಲ.
ಜಿಲ್ಲೆಯಲ್ಲಿ ಹೈನುಗಾರಿಕೆ ಅವಲಂಬಿಸಿದವರ ಸಂಖ್ಯೆ ಹೆಚ್ಚಿದೆ. ರೈತರು ವ್ಯವಸಾಯದ ಜತೆಗೆ ಪರ್ಯಾಯ ಮಾರ್ಗವಾಗಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಡೇರಿಗೆ ಹಾಲು ಹಾಕುವ ಮೂಲಕ ಬದುಕು ಕಟ್ಟಿಕೊಂಡಿರುವ ತುಂಬಾ ಕುಟುಂಬಗಳಿವೆ. ಮಳೆಗಾಲದಲ್ಲಿ ಸಿಡಿಲು, ಕಾಯಿಲೆಗೆ ಜಾನುವಾರು ತುತ್ತಾದರೆ ಇಡೀ ಕುಟುಂಬ ಸಂಕಷ್ಟ ಎದುರಿಸಬೇಕಾಗುತ್ತದೆ.
ರಾಸುಗಳ ಆಕಸ್ಮಿಕ ಸಾವಿನಿಂದ ಕಂಗಾಲಾದ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು ಯೋಜನೆ ಪ್ರಾರಂಭಿಸಲಾಗಿತ್ತು. ಆದರೆ, ಪರಿಹಾರದ ಹಣ ಸಕಾಲಕ್ಕೆ ಸಿಗುತ್ತಿಲ್ಲ. ಪರಿಹಾರದ ಹಣ ಬರುತ್ತದೆ ಎಂಬ ನಂಬಿಕೆಯಿಂದ ಹೈನುಗಾರರು ಸಾಲ ಮಾಡಿ ಹಸು ಖರೀದಿಸುತ್ತಿದ್ದಾರೆ. ರಾಸು ಮೃತಪಟ್ಟು ಹಲವು ತಿಂಗಳುಗಳು ಕಳೆದರೂ ಅವರ ಖಾತೆಗೆ ಹಣ ಸಂದಾಯ ಆಗುತ್ತಿಲ್ಲ.
‘ಕಚೇರಿಗೆ ಅಲೆಯುವುದು ತಪ್ಪಿಲ್ಲ. ಹೊಸದಾಗಿ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಆಗುತ್ತಿಲ್ಲ. ಪರಿಹಾರ ವಿತರಣೆ ಮತ್ತಷ್ಟು ತಡವಾಗುತ್ತಿದೆ’ ಎಂದು ತುರುವೇಕೆರೆ ತಾಲ್ಲೂಕು ಮಾಯಸಂದ್ರದ ನಾಗಭೂಷಣ್ ಪ್ರತಿಕ್ರಿಯಿಸಿದರು.
2025ರಲ್ಲಿ ಮೃತಪಟ್ಟ ರಾಸುಗಳು
ತಿಂಗಳು; ರಾಸು
ಜನವರಿ; 193
ಫೆಬ್ರುವರಿ; 173
ಮಾರ್ಚ್; 221
ಏಪ್ರಿಲ್; 212
ಮೇ; 224
ಜೂನ್;236
ಪರಿಹಾರ ವಿತರಣೆ
ವಿಧಾನಸಭಾ ಕ್ಷೇತ್ರ; ರಾಸು; ಹಣ (₹ ಲಕ್ಷ)
ಚಿಕ್ಕನಾಯಕನಹಳ್ಳಿ; 222; 22.20
ತಿಪಟೂರು; 169; 16.48
ತುರುವೇಕೆರೆ; 148; 14.08
ಕುಣಿಗಲ್; 197; 19.22
ತುಮಕೂರು ನಗರ; 22; 1.78
ತುಮಕೂರು ಗ್ರಾಮಾಂತರ;148;14.34
ಕೊರಟಗೆರೆ; 158; 15.75
ಗುಬ್ಬಿ; 111; 11.05
ಶಿರಾ; 218; 21.80
ಪಾವಗಡ; 212; 21.20
ಮಧುಗಿರಿ; 182; 18.20
ಒಟ್ಟು; 1,787; 176.82
ಸರ್ಕಾರಕ್ಕೆ ಮನವಿ
ಅನುಗ್ರಹ ಯೋಜನೆಯಡಿ ಬಾಕಿ ಹಣ ಬಿಡುಗಡೆ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಹಣ ಸಂದಾಯ ಆಗಬಹುದು. ಈ ವರ್ಷದ ಮಳೆಗಾಲದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ಒದಗಿಸಲಾಗಿದೆ. ಬಾಕಿ ಪರಿಹಾರದ ಹಣ ವಿತರಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ.– ಶಿವಪ್ರಸಾದ್, ಉಪನಿರ್ದೇಶಕ ಪಶುಪಾಲನೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.