ADVERTISEMENT

ಹಂಗರಹಳ್ಳಿ: ಕಲ್ಲು ಗಣಿಗಾರಿಕೆಯಿಂದ ಜಾನುವಾರು, ಜನರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:29 IST
Last Updated 15 ಡಿಸೆಂಬರ್ 2021, 4:29 IST
ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಭೇಟಿ ನೀಡಿ ಪರಿಶೀಲಿಸಿದರು. ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯ ಜಿ.ಕೆ. ನಾಗಣ್ಣ ಹಾಜರಿದ್ದರು
ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಭೇಟಿ ನೀಡಿ ಪರಿಶೀಲಿಸಿದರು. ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯ ಜಿ.ಕೆ. ನಾಗಣ್ಣ ಹಾಜರಿದ್ದರು   

ಕುಣಿಗಲ್: ತಾಲ್ಲೂಕಿನ ಹಂಗರಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯರುಮತ್ತು ಜಾನುವಾರು ಸಂಕಷ್ಟಕ್ಕೀಡಾಗಿವೆ. ಇದರ ವಿರುದ್ಧ ನ್ಯಾಯಯುತ ಹೋರಾಟದ ಅಗತ್ಯವಿದೆ ಎಂದು ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಾಡುಗೊಲ್ಲರ ಹೋರಾಟ ಅಸ್ಮಿತೆ ಸಮಿತಿಯ ಪದಾಧಿಕಾರಿಗಳ ಮನವಿ ಮೇರೆಗೆ ತಾಲ್ಲೂಕಿನ ಹಂಗರಹಳ್ಳಿಯ ಸರ್ವೆ ನಂ. 46ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಕ್ರಷರ್ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಕಲ್ಲು ಗಣಿಗಾರಿಕೆ ಸಂಬಂಧ ಸರ್ಕಾರದ ನಿಯಮ ಪಾಲನೆಯಾಗುತ್ತಿಲ್ಲ. ಗಣಿಗಾರಿಕೆ ಮಾಡುತ್ತಿರುವವರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಗಣಿಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತೆ ಮೀಸಲು ಅರಣ್ಯ ಪ್ರದೇಶವಿದೆ. ದೂಳು ಮತ್ತು ಸ್ಫೋಟಕದ ಸದ್ದಿಗೆ ಜೀವಜಂತುಗಳ ನಾಶವಾಗುತ್ತಿದೆ. ಸರ್ವೆ ನಂ. 46ರ ಗೋಮಾಳ ಜಾಗದಲ್ಲಿ ಕಾಡುಗೊಲ್ಲ ಬುಡಕಟ್ಟು ಜನಾಂಗದವರು ಕುರಿ ಮೇಯಿಸುತ್ತಿದ್ದು, ಗಣಿಗಾರಿಕೆಯಿಂದ ಪಶುಪಾಲನೆಗೂ ಅಡ್ಡಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆಯಿಂದ ಲಂಬಾಣಿ ತಾಂಡಾ, ವಾಜರಪಾಳ್ಯ, ಹಂಗರಹಳ್ಳಿ ಮತ್ತು ದೊಡ್ಡೆಗೌಡನ ಪಾಳ್ಯದಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ನಾಶವಾಗುತ್ತಿರುವ ಬೆಳೆಗಳು ಮತ್ತು ಮನೆಗಳ ಹಾನಿಯನ್ನು ವೀಕ್ಷಿಸಿದರು.

ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯ ಸಂಚಾಲಕ ಜಿ.ಕೆ. ನಾಗಣ್ಣ, ಕಾರ್ಯದರ್ಶಿ ಧನಂಜಯ್ಯ, ಪುರಸಭೆ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್, ರಾಜಣ್ಣ, ದೊಡ್ಡಯ್ಯ, ಶಿವಕುಮಾರ್ ನಾಯಕ್, ಶಂಕರ್ ನಾಯಕ, ನವೀನ ಹಾಜರಿದ್ದರು.

ವರದಿಗೆ ಸೂಚನೆ: ‘ಹಂಗರಹಳ್ಳಿ ಸರ್ವೆ ನಂ. 46ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಭೂ ಪರಿವರ್ತನೆ ವಿಚಾರದಲ್ಲಿ ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿಯವರು ದೂರು ನೀಡಿದ್ದಾರೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಗಮನ ಹರಿಸಬೇಕಿದೆ. ಇನ್ನೂ ದೂಳು ಮತ್ತು ಪರಿಸರದ ಹಾನಿ ಬಗ್ಗೆ ಬಂದಿರುವ ದೂರಿನ ಬಗ್ಗೆ ಪರಿಸರ ಸಂರಕ್ಷಣೆಯ ಅಧಿಕಾರಿಗಳಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಭೂ ವಿಜ್ಞಾನಿ ಕಾರ್ತೀಕ ತಿಳಿಸಿದರು.

ಅಕ್ರಮ ನಡೆಯುತ್ತಿಲ್ಲ: ‘ಹಂಗರಹಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮ ಪಾಲಿಸಲಾಗುತ್ತಿದೆ. ಆರೋಪಗಳು ಮತ್ತು ಪರಿಶೀಲನೆಗಳು ನಿರಂತರವಾಗಿ ನಡೆಯುತ್ತಿವೆ. ಅಕ್ರಮವಾಗಿದ್ದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಗಣಿ ಮಾಲೀಕ ಸುರೇಶ ಮತ್ತು ಕ್ರಷರ್ ಮಾಲೀಕ ಪುಟ್ಟಸ್ವಾಮಿ ’ಪ್ರಜಾವಾಣಿ’ಗೆ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.