ತುಮಕೂರು: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪರಿಷತ್ತಿನ ಅಧ್ಯಕ್ಷರು ದಿಕ್ಕೆಟ್ಟು, ದಾರಿ ತಪ್ಪಿದ್ದಾರೆ ಎಂದು ಲೇಖಕ ಜಾಣಗೆರೆ ವೆಂಕಟರಾಮಯ್ಯ ಇಲ್ಲಿ ಶನಿವಾರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಪರಿಷತ್ತಿನ ಅಧ್ಯಕ್ಷರು ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ನಿಯಂತ್ರಣ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಪರಿಷತ್ತು ಅಧ್ಯಕ್ಷರು, ಪದಾಧಿಕಾರಿಗಳು ಜಿಲ್ಲಾ ಸಮ್ಮೇಳನಕ್ಕೆ ಬಂದು ಕನ್ನಡಿಗರ ನೋವು, ನಲಿವು, ಸಂಕಟ, ಆಲಿಸಬೇಕಿತ್ತು. ಕನ್ನಡಿಗರ ಸಮಸ್ಯೆ ಕೇಳುವ ಜವಾಬ್ದಾರಿ ಇಲ್ಲವಾಗಿದೆ. ಇವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜ್ವರ ಅಂಟಿಕೊಂಡಿದೆ. ಎಲ್ಲರೂ ಅದರ ಗುಂಗಿನಲ್ಲೇ ಮುಳುಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೂರು ವರ್ಷ ಇದ್ದ ಅಧಿಕಾರ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಿಕೊಂಡು ಪರಿಷತ್ತಿನ ಅಧ್ಯಕ್ಷರು ಮಜಾ ಮಾಡುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಕೇವಲ ರಾಜಕಾರಣ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಷತ್ತು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರಗೊಂಡಿಲ್ಲ. ಕನ್ನಡಿಗರ ಸಮಸ್ಯೆ ಕೇಳುವವರಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮರೆಯಾಗಿದೆ ಎಂದು ಆರೋಪಿಸಿದರು.
ಪರಿಷತ್ತನ್ನು ‘ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎನ್ನುತ್ತೇವೆ. ರಾಜ್ಯದಲ್ಲಿ 7 ಕೋಟಿ ಜನರಿದ್ದರೂ ಕೇವಲ 4.50 ಲಕ್ಷ ಮಂದಿಗಷ್ಟೇ ಪರಿಷತ್ತಿನ ಸದಸ್ಯತ್ವ ನೀಡಲಾಗಿದೆ. ಇನ್ನೂ ಜನಸಾಮಾನ್ಯರು ಪರಿಷತ್ತಿನ ಒಳಗೆ ಬರಲು ಸಾಧ್ಯವಾಗಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರೊಬ್ಬರು ಅಧ್ಯಕ್ಷರಾಗುವ ಅವಕಾಶ ಸಿಕ್ಕಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಮರೆತು ಕೆಲವರಷ್ಟೇ ಅಧಿಕಾರ ಅನುಭವಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಕನ್ನಡಿಗರ ಸಮಸ್ಯೆಗಳಿಗೆ ಪರಿಷತ್ತು ಧ್ವನಿಯಾಗುತ್ತಿಲ್ಲ. ಹಿಂದಿನ ಹಲವು ಸಮಸ್ಯೆಗಳಿಗೆ ಹೋರಾಟ ಮಾಡಿಕೊಂಡು ಬಂದಿದ್ದು, ಈಗ ಉತ್ತರ ಭಾರತದವರ ವಲಸೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರಿಂದ ಕನ್ನಡಿಗರು ಉದ್ಯೋಗ, ವಸತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರಕ್ಕೆ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ‘ಯುವ ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ನಗರದಲ್ಲಿ ತಿಂಗಳಿಗೆ ₹10 ಸಾವಿರ ದುಡಿಯುವವರಿಗೆ ಹೆಣ್ಣು ಕೊಡಲಾಗುತ್ತಿದೆ. ಹಳ್ಳಿಯಲ್ಲಿ ಕೃಷಿಯಿಂದ ₹50 ಸಾವಿರ ದುಡಿದರೂ ಹೆಣ್ಣು ಕೊಡುತ್ತಿಲ್ಲ, ಇಂತಹ ಸಾಮಾಜಿಕ ಸಮಸ್ಯೆಗಳು ಸಮ್ಮೇಳನದಲ್ಲಿ ಚರ್ಚೆಯಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಉತ್ತರ ಭಾರತದಿಂದ ವಲಸಿಗರು ಬರುತ್ತಿದ್ದರೂ ಹಿಂದಿನಷ್ಟು ಸಮಸ್ಯೆಗಳಿಲ್ಲ. ಕೆಲವರು ಕನ್ನಡ ಮನಸ್ಸುಗಳಿಗೆ ಸ್ಪಂದಿಸುತ್ತಿದ್ದಾರೆ’ ಎಂದರು.
ಸಮ್ಮೇಳನಾಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಡಾ ಆಯುಕ್ತ ಜಿ.ಆರ್.ನಟರಾಜ್, ಪ್ರಮುಖರಾದ ಎಂ.ಝಡ್.ಕುರಿಯನ್, ಎಚ್.ಜಿ.ಚಂದ್ರಶೇಖರ್, ನೇ.ಭ.ರಾಮಲಿಂಗಶೆಟ್ಟಿ, ರವೀಂದ್ರ ಸಿರಿವರ, ಚಂದ್ರಶೇಖರ್‌ಗೌಡ, ಮುರುಳಿ ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು. ಎಸ್.ಯೋಗಾನಂದ ಸ್ವಾಗತಿಸಿ, ರಾಣಿ ಚಂದ್ರಶೇಖರ್ ನಿರೂಪಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.