ADVERTISEMENT

ಹಾಸ್ಟೆಲ್‌ಗಳಲ್ಲಿ ಶುಚಿತ್ವ ಕಾಪಾಡಿ

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 12:08 IST
Last Updated 6 ಸೆಪ್ಟೆಂಬರ್ 2019, 12:08 IST
ಶುಭಾ ಕಲ್ಯಾಣ್
ಶುಭಾ ಕಲ್ಯಾಣ್   

ತುಮಕೂರು: ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವ ಕಾಪಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನಿಲಯಗಳಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಶುದ್ಧ ಕುಡಿಯುವ ನೀರು, ಆಟೋಟಗಳ ಬಗ್ಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಧಿಕಾರಿಗಳು ತಮ್ಮ ಕೆಳಗಿನ ಸಿಬ್ಬಂದಿಗೆ ವೇತನ ಪಾವತಿ ಆಗಿರುವ ಬಗ್ಗೆ ಪರಿಶೀಲಿಸಬೇಕು. ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಿಗೆ ತಪ್ಪದೇ ನಿಗದಿತ ಅವಧಿಯೊಳಗೆ ವೇತನ ಪಾವತಿಸಬೇಕು. ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡಿದ್ದಲ್ಲಿ ವಿವರಗಳನ್ನು ಜಿಲ್ಲಾ ಪಂಚಾಯಿತಿ ಅನುಮೋದನೆಗೆ ಸಲ್ಲಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಹೊರಗುತ್ತಿಗೆ ಸಿಬ್ಬಂದಿಯನ್ನು ಹಣಕಾಸು ಇಲಾಖೆ ಅನುಮೋದನೆ ಪಡೆದು ನೇಮಕ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ನೌಕರರಿಗೆ ಹಿಂದಿನ ಸಾಲುಗಳಲ್ಲಿ ವೇತನ ಪಾವತಿ ಆಗದಿದ್ದಲ್ಲಿ ನಿಯಮಾನುಸಾರ ಕ್ರಮವಹಿಸಬೇಕು. ಹೊರಗುತ್ತಿಗೆ ಪಡೆದ ಸಂಸ್ಥೆಯವರು ವೇತನ ಪಾವತಿಸಿದ ನಂತರ ಇಪಿಎಫ್ ಮತ್ತು ಇಎಸ್ಐ ಪಾವತಿಸಿರುವ ಬಗ್ಗೆ ಪರಿಶೀಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.