
ತುಮಕೂರು: ಜಿಲ್ಲಾ ಆಡಳಿತ, ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಾಕಷ್ಟು ಗೊಂದಲ, ಅವ್ಯವಸ್ಥೆಗಳ ಮಧ್ಯೆಯೇ ಕೊನೆಗೊಂಡಿತು.
ಹಲವು ಸ್ಪರ್ಧೆಗಳ ವಿಜೇತರು ಪ್ರಶಸ್ತಿ ಪತ್ರ ಪಡೆಯಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ಮುಗಿ ಬಿದ್ದಿದ್ದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಿತು. ‘ಗುರುವಾರ ಸಂಜೆ ಸಮಾರೋಪ ಸಮಾರಂಭ ನಡೆಯುತ್ತದೆ, ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ’ ಎಂದು ನೌಕರ ಕ್ರೀಡಾಪಟುಗಳು ಕಾಯುತ್ತಾ ಕುಳಿತಿದ್ದರು. ಸಂಜೆ 6 ಗಂಟೆಯಾದರೂ ಸಮಾರೋಪ ಕಾರ್ಯಕ್ರಮ ನಡೆಯಲಿಲ್ಲ. ಕೆಲವರಿಗೆ ವೇದಿಕೆಯಲ್ಲಿ ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಲವು ಕ್ರೀಡಾಪಟುಗಳು ಕ್ರೀಡಾ ಇಲಾಖೆ ಕಚೇರಿಯಲ್ಲಿ ಪ್ರಶಸ್ತಿ ಪತ್ರಕ್ಕಾಗಿ ಮುಗಿ ಬಿದ್ದಿದ್ದರು.
ಮೊದಲ ದಿನವೇ ಫಲಿತಾಂಶ ಬಂದಿರುವ ವಿಜೇತರಿಗೆ ಕ್ರೀಡಾಕೂಟ ಮುಗಿದರೂ ಪ್ರಶಸ್ತಿ ಪತ್ರ ಸಿಗಲಿಲ್ಲ. ಪಾವಗಡ, ಶಿರಾ ಸೇರಿದಂತೆ ದೂರದ ತಾಲ್ಲೂಕುಗಳಿಂದ ಬಂದಿದ್ದ ಕ್ರೀಡಾಪಟುಗಳು ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಪದಕ ಸಿಗದೇ ಕೇವಲ ಪ್ರಶಸ್ತಿ ಪತ್ರ ಪಡೆದುಕೊಂಡು ತೆರಳಿದರು.
'ಇದೇ ವರ್ಷ ಈ ರೀತಿಯಾಗುತ್ತಿದೆ. ಕ್ರೀಡಾಕೂಟದ ಆಯೋಜನೆ ಸರಿಯಾಗಿಲ್ಲ. ಯಾವ ಸ್ಪರ್ಧೆಗೆ ಎಲ್ಲಿ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ ಎಂಬ ಮಾಹಿತಿಯೇ ಇಲ್ಲ. ಸ್ಪರ್ಧೆಯಲ್ಲಿ ಗೆದ್ದ ನಂತರ ಪ್ರಶಸ್ತಿ ಪತ್ರಕ್ಕಾಗಿ ಮತ್ತೊಮ್ಮೆ ಸ್ಪರ್ಧೆ ಮಾಡಬೇಕಾಗಿದೆ. ತುಂಬಾ ಅಧ್ವಾನ ಆಗಿದೆ. ಸಂತೆಯ ರೀತಿಯಾಗಿದೆ. ಕ್ರೀಡೆಯಲ್ಲಿ ಗೆದ್ದವರಿಗೆ ಗೌರವ ಇಲ್ಲದಂತಾಗಿದೆ' ಎಂದು ನೌಕರರೊಬ್ಬರು ಬೇಸರ ಹೊರ ಹಾಕಿದರು.
'ತುಂಬಾ ಕೆಟ್ಟದಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಒಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲು ಆಗದಿದ್ದರೆ ಹೇಗೆ? ಸಂಜೆ 5 ಗಂಟೆಯಿಂದ ಕಾಯುತ್ತಿದ್ದೇವೆ ಒಂದು ಪ್ರಶಸ್ತಿ ಪತ್ರ ಸಿಗುತ್ತಿಲ್ಲ. ತುಂಬಾ ಗೊಂದಲ ಆಗುತ್ತಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ಪತ್ರ ಸಿಗುತ್ತಿಲ್ಲ' ಎಂದು ಹಲವರು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.