ತುಮಕೂರು: ತಾಲ್ಲೂಕಿನ ನೆಲಹಾಳ್ ಕೆರೆಯಲ್ಲಿ ನೂರಾರು ಮೀನುಗಳ ಸಾವನ್ನಪ್ಪಿವೆ. ಕೆರೆಗೆ ರಾಸಾಯನಿಕ ತ್ಯಾಜ್ಯ ಸುರಿದ ಆರೋಪದ ಮೇರೆಗೆ ಕೋರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಹ್ಮದ್ ಇಬ್ರಾಹಿಂ, ಅಲ್ತಾಫ್, ಮಹ್ಮದ್ ಫರ್ವೀಜ್ ಬಂಧಿತರು. ಮೂವರು ಶನಿವಾರ ಮಧ್ಯರಾತ್ರಿ ತಾಲ್ಲೂಕಿನ ಗಿರಿಯನಹಳ್ಳಿ ಸಮೀಪ ಟ್ಯಾಂಕರ್‌ನಿಂದ ತ್ಯಾಜ್ಯ ಸುರಿಯುತ್ತಿದ್ದರು. ನೆಲಹಾಳ್‌ನ ಎನ್.ನಟರಾಜ್, ರಮೇಶ್ ಇದನ್ನು ಗಮನಿಸಿದ್ದಾರೆ. ಟ್ಯಾಂಕರ್ ಚಾಲಕ ಮತ್ತು ಕ್ಲೀನರ್‌ನ ವಿಚಾರಿಸಿದಾಗ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ತ್ಯಾಜ್ಯ ಎಂಬುವುದು ಗೊತ್ತಾಗಿದೆ. ಟ್ಯಾಂಕರ್ ಜತೆಗೆ ಮೂವರನ್ನು ಕೋರ ಠಾಣೆಗೆ ಒಪ್ಪಿಸಿದ್ದಾರೆ.
‘ಶುಕ್ರವಾರ ರಾತ್ರಿ ಟ್ಯಾಂಕರ್ ವಾಹನದಲ್ಲಿ ರಾಸಾಯನಿಕ ತ್ಯಾಜ್ಯ ತಂದು ನೆಲಹಾಳ್ ಕೆರೆಗೆ ಸುರಿದಿದ್ದಾರೆ. ಇದರಿಂದ ಮೀನುಗಳು ಸತ್ತಿವೆ. ಇದರಂತೆ ಅನೇಕ ಕೆರೆಗಳಿಗೆ ಇವರು ತ್ಯಾಜ್ಯ ಸುರಿದ ಸಾಧ್ಯತೆ ಇದೆ’ ಎಂದು ನಟರಾಜ್ ನೀಡಿದ ದೂರಿನ ಮೇರೆಗೆ ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗೆ ತ್ಯಾಜ್ಯ ಸುರಿಯುವುದರಿಂದ ಪ್ರಾಣಿ, ಪಕ್ಷಿಗಳ ಜೀವಕ್ಕೆ ಹಾನಿಯಾಗಲಿದೆ. ವಾತಾವರಣ ಮಲಿನವಾಗುತ್ತದೆ. ಟ್ಯಾಂಕರ್ ವಾಹನದಲ್ಲಿ ತ್ಯಾಜ್ಯ ತಂದು ಕೆರೆಗೆ ಹಾಕುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
‘ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತ್ಯಾಜ್ಯ ಕೆರೆಗೆ ಬಿಡಲಾಗಿದೆ. ಕಾರ್ಖಾನೆ ಹೊಸದಾಗಿ ಪ್ರಾರಂಭಿಸಿದ್ದು, ಹೆಸರು ತಿಳಿದು ಬಂದಿಲ್ಲ. ಈಗಾಗಲೇ ಸತ್ತ ಮೀನಿನ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ವರದಿ ಬಂದ ನಂತರ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಕೋರ ಪೊಲೀಸರು ತಿಳಿಸಿದ್ದಾರೆ.
ಶಾಸಕ ಬಿ.ಸುರೇಶ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು. ತನಿಖೆ ನಡೆಸಿ, ಕಾರ್ಖಾನೆ ಮುಚ್ಚಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.