ADVERTISEMENT

ನಿರ್ವಹಣೆ ಕೊರತೆ; ಸೊರಗಿದ ನೀರಿನ ಘಟಕ

ಸ್ಥಳೀಯರಿಗೆ ದೂರದಿಂದ ನೀರು ತರುವ ಅನಿವಾರ್ಯ: ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:24 IST
Last Updated 29 ಡಿಸೆಂಬರ್ 2025, 7:24 IST
ಚಿಕ್ಕನಾಯಕನಹಳ್ಳಿಯ ಬಸವೇಶ್ವರನಗರದ ಕುಡಿಯುವ ನೀರಿನ ಘಟಕ
ಚಿಕ್ಕನಾಯಕನಹಳ್ಳಿಯ ಬಸವೇಶ್ವರನಗರದ ಕುಡಿಯುವ ನೀರಿನ ಘಟಕ   

ಚಿಕ್ಕನಾಯಕನಹಳ್ಳಿ: ಪಟ್ಟಣದ ಬಸವೇಶ್ವರ ನಗರ ವಾರ್ಡ್‌ನಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಅವನತಿ ಹೊಂದಿದೆ.

ಈ ನೀರಿನ ಘಟಕ ಬಸವೇಶ್ವರ ನಗರ, ಸರಸ್ವತಿಪುರ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಬನಶಂಕರಿ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿತ್ತು. ಈ ಘಟಕ ಕಾರ್ಯರೂಪದಲ್ಲಿದ್ದರೆ ಸಾವಿರಾರು ನಾಗರಿಕರು ತಮ್ಮ ಮನೆಗಳ ಸಮೀಪದಲ್ಲೇ ಶುದ್ಧ ನೀರನ್ನು ಪಡೆದುಕೊಳ್ಳಬಹುದಿತ್ತು.

ಪಟ್ಟಣದಲ್ಲಿ ಬೆರಳೆಣಿಕೆಯಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಆ ಘಟಕಗಳನ್ನೇ ಅವಲಂಬಿಸಿದ್ದಾರೆ. ಬಸವೇಶ್ವರ ನಗರದ ಘಟಕ ಸ್ಥಗಿತಗೊಂಡಿರುವುದರಿಂದ ಸುತ್ತಲಿನ ಬಡಾವಣೆಗಳ ಜನರು ದೂರದ ಘಟಕಗಳನ್ನು ಅವಲಂಬಿಸುವುದು ಅನಿವಾರ್ಯ.

ADVERTISEMENT

ಪ್ರಾರಂಭದಲ್ಲಿ ಈ ಘಟಕ ಉದ್ಘಾಟನೆಗೆ ಸೀಮಿತವಾಗಿತ್ತು. ನಂತರ ಹಲವು ದಿನ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ಕೇಳಿಬಂದಾಗ, ಪುರಸಭೆ ಅಧಿಕಾರಿಗಳು ನಿರ್ವಹಣೆಗಾಗಿ ಸಿಬ್ಬಂದಿಯನ್ನು ನೇಮಿಸಿದ್ದರು. ಆದರೆ ಅದು ಅಲ್ಪಾವಧಿಗೆ ಸೀಮಿತವಾಯಿತು. ಆಡಳಿತದ ಈ ತಾತ್ಕಾಲಿಕ ಕ್ರಮಗಳು ಮತ್ತು ಶಾಶ್ವತ ನಿರ್ವಹಣೆಯ ಬಗೆಗಿನ ನಿರ್ಲಕ್ಷ್ಯವೇ ಘಟಕದ ಅವನತಿಗೆ ಕಾರಣವಾಯಿತು ಎನ್ನುತ್ತಾರೆ ಸ್ಥಳೀಯರು.

ಹಾನಿಗೊಂಡ ಘಟಕದ ಮುಂಭಾಗ
ತುಕ್ಕು ಹಿಡಿದಿರುವ ಯಂತ್ರಗಳು 

ಶುಚಿತ್ವ ಇರಲಿಲ್ಲ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೊಂಡು ಹಲವು ವರ್ಷಗಳೇ ಕಳೆದಿವೆ. ಹಿಂದುಳಿದ ವರ್ಗದ ಯೋಜನೆಯಲ್ಲಿ ಸ್ಥಾಪನೆಗೊಂಡಿತ್ತು. ಹಲವು ತಿಂಗಳು ನಿರ್ವಹಣೆ ಇರಲಿಲ್ಲ. ನಂತರ ನಿರ್ವಹಣೆ ವಹಿಸಿಕೊಂಡವರು ಸರಿಯಾಗಿ ಕಾರ್ಯನಿರ್ವಹಿಸದೆ ಅರ್ಧಕ್ಕೆ ಬಿಟ್ಟು ಹೋದರು. ನಿರ್ವಹಣೆ ಶುಚಿತ್ವ ಕಾಪಾಡುತ್ತಿರಲಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಪ್ರಶಾಂತ್ ಸ್ಥಳೀಯ ಮನವಿಗೆ ಸ್ಪಂದನೆ ಇಲ್ಲ ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕ ಈ ಸ್ಥಿತಿಯಲ್ಲಿದೆ. ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಮನೆಯ ಹತ್ತಿರವೇ ಘಟಕವಿದ್ದರೂ ದೂರ ಹೋಗಿ ನೀರು ತರಬೇಕಾದ ಸ್ಥಿತಿ ಎದುರಾಗಿದೆ. ತುರ್ತು ಕ್ರಮ ಅಗತ್ಯ. ನರಸಿಂಹಯ್ಯ ಬನಶಂಕರಿ ಬಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.