ಚಿಕ್ಕನಾಯಕನಹಳ್ಳಿ: ಪ್ರಸ್ತುತ ಅನೇಕ ರೈತರು ವ್ಯವಸಾಯ ಮಾಡಲು ಬೇಸರ ವ್ಯಕ್ತಪಡಿಸುತ್ತಾರೆ. ಎರಡು ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಎಲ್ಲ ರೈತರಿಗೆ ವಿಶ್ವನಾಥ್ ಮಾದರಿಯಾಗಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಅಣೆಕಟ್ಟೆ ಗ್ರಾಮದ ಪ್ರಗತಿಪರ ಕೃಷಿಕ ವಿಶ್ವನಾಥ್ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
ಜಮೀನಿನಲ್ಲಿರುವ ಎಲ್ಲ ಬೆಳೆಗಳು ಆರೋಗ್ಯವಾಗಿವೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರವನ್ನು ಹೆಚ್ಚು ಬಳಸಿದ್ದರಿಂದ ರಾಗಿ ತೆನೆ ಬಲಿಷ್ಠವಾಗಿದೆ. ಒಳ್ಳೆಯ ಇಳುವರಿ ಬರುವ ಎಲ್ಲ ನಿರೀಕ್ಷೆಗಳಿವೆ. ಒಣ ಭೂಮಿಯಲ್ಲಿ ಬೆಳೆಯುವ ಸೂರ್ಯಕಾಂತಿ, ರಾಗಿ, ಸೊಪ್ಪಿನ ದಂಟು, ಅವರೆ ಕಾಳು, ಮೂಲಂಗಿ, ಬೆಂಡೆಕಾಯಿ ಅನೇಕ ಸೊಪ್ಪಿನ ಬೆಳೆಗಳನ್ನು ಹಾಕಲಾಗಿದೆ ಎಂದರು.
ರಾಗಿಯ ಜೊತೆ ಕಾಳುಗಳನ್ನು ಬೆಳೆಯುವುದರಿಂದ ಪ್ರೋಟಿನ್, ಕಾರ್ಬೋಹೈಡ್ರೇಟ್ಸ್ ಎಲ್ಲವೂ ರಾಗಿ ಹೊಲದಲ್ಲಿ ಸಿಗುತ್ತದೆ. ಆದ್ದರಿಂದ ಗುಣಮಟ್ಟದ ಉತ್ಪಾದನೆಗೆ ಉದ್ದೇಶವಿದೆ. ಹವಾಮಾನ ವೈಪರೀತ್ಯಕ್ಕೆ ಉತ್ತರವಾಗಿ ಮಿಶ್ರಬೆಳೆ ಮಾಡುವುದು ಪೂರಕ ಎಂದರು.
ತಾಲ್ಲೂಕು ಕೃಷಿ ಅಧಿಕಾರಿ ಕರಿಬಸವಯ್ಯ ಮಾತನಾಡಿ, ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದ್ದಾರೆ. ಬಹುತೇಕ ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಅಕ್ಕಡಿ ಹಾಕುವ ಪದ್ಧತಿಯೇ ಕಡಿಮೆಯಾಗಿದೆ. ನೀರಾವರಿ ಇಲ್ಲದೆ ಬೆಳೆದಿದ್ದು, ಬಹುತೇಕ ರೋಗ ಹಾಗೂ ಕೀಟಗಳು ಇಲ್ಲದಿರುವುದು ಕಂಡು ಬಂದಿದೆ. ಯೂರಿಯಾವನ್ನು ಸೀಮಿತವಾಗಿ ಬಳಸಿದ್ದು ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ ಎಂದರು.