ADVERTISEMENT

ಸದಸ್ಯರಿಲ್ಲದ ಮಕ್ಕಳ ಕಲ್ಯಾಣ ಸಮಿತಿ

ಎರಡು ತಿಂಗಳಿನಿಂದ 2 ಸದಸ್ಯ ಹುದ್ದೆ ಖಾಲಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:03 IST
Last Updated 7 ಜನವರಿ 2026, 6:03 IST
ತುಮಕೂರಿನ ಮಕ್ಕಳ ರಕ್ಷಣಾ ಘಟಕದ ಕಚೇರಿ
ತುಮಕೂರಿನ ಮಕ್ಕಳ ರಕ್ಷಣಾ ಘಟಕದ ಕಚೇರಿ   

ತುಮಕೂರು: ಮಕ್ಕಳ ಪಾಲನೆ, ಪೋಷಣೆ, ರಕ್ಷಣೆಯ ಉದ್ದೇಶ ಹೊಂದಿರುವ ಮಕ್ಕಳ ಕಲ್ಯಾಣ ಸಮಿತಿ ನಾಮಕಾವಸ್ತೆ ಎಂಬಂತೆ ನಡೆಯುತ್ತಿದೆ. ಎರಡು ತಿಂಗಳ ಹಿಂದೆ ಇಬ್ಬರು ಸದಸ್ಯರು ಸಮಿತಿಗೆ ರಾಜೀನಾಮೆ ನೀಡಿದ್ದು, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಒಬ್ಬ ಅಧ್ಯಕ್ಷರು, ನಾಲ್ವರು ಸದಸ್ಯರನ್ನು ಸಮಿತಿಗೆ ನೇಮಿಸಲಾಗುತ್ತದೆ. ವಾರಕ್ಕೆ ಮೂರು ದಿನ, ತಿಂಗಳಿಗೆ 20 ಸಭೆಗಳನ್ನು ನಡೆಸಬೇಕು ಎಂಬ ನಿಯಮ ಜಾರಿಯಲ್ಲಿದೆ.

ಸಭೆ ನಡೆಸಲು ಅಧ್ಯಕ್ಷರು, ಕನಿಷ್ಠ ಇಬ್ಬರು ಸದಸ್ಯರು ಇರಲೇಬೇಕು. ಎರಡು ತಿಂಗಳಿನಿಂದ ಎರಡು ಸದಸ್ಯ ಸ್ಥಾನಗಳು ಖಾಲಿ ಉಳಿದಿದ್ದು, ಸಮಿತಿಯ ಸಭೆ ಮಹತ್ವ ಕಳೆದುಕೊಳ್ಳುತ್ತಿದೆ. ಈಗಿರುವ ಅಧ್ಯಕ್ಷರು ಮತ್ತು ಸದಸ್ಯರು ಬೆಂಗಳೂರಿನ ಸಮಿತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡೂ ಕಡೆ ಹೊಂದಾಣಿಕೆ ಮಾಡಿಕೊಂಡು ಸಭೆಗೆ ಹಾಜರಾಗಲು ಪರದಾಡುತ್ತಿದ್ದಾರೆ. ಕೋರಂ ಇಲ್ಲದ ಸಭೆಗಳು ಅನುಪಾಲನಾ ವರದಿ ಸಿದ್ಧಪಡಿಸಲು ಮಾತ್ರ ಸೀಮಿತವಾಗುತ್ತಿವೆ. ತಿಂಗಳುಗಳಿಂದ ಖಾಲಿ ಉಳಿದ ಎರಡು ಸ್ಥಾನಗಳ ಭರ್ತಿಗೂ ಕ್ರಮ ವಹಿಸಿಲ್ಲ.

ADVERTISEMENT

ಬಾಲ್ಯ ವಿವಾಹ, ಪೋಕ್ಸೊ ಪ್ರಕರಣದ ಸಂತ್ರಸ್ತ ಬಾಲಕಿಯರು, ಮನೆ ಬಿಟ್ಟು ಬಂದ, ಭಿಕ್ಷಾಟನೆಯಲ್ಲಿ ತೊಡಗಿರುವ, ಚಿಂದಿ ಆಯುವ ಹಾಗೂ ಬಾಲ ಕಾರ್ಮಿಕ, ಪೋಷಕರ ನಿರ್ಲಕ್ಷ್ಯಕ್ಕೆ ಒಳಪಟ್ಟ ಮಕ್ಕಳನ್ನು ಬಾಲ ಮಂದಿರಕ್ಕೆ ಸೇರಿಸುವುದು, ಮಂದಿರದ ಮಕ್ಕಳನ್ನು ಮನೆಗೆ ಕಳುಹಿಸುವುದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿದಂತೆ ಪ್ರಮುಖ ವಿಚಾರಗಳನ್ನು ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

‘ಮಕ್ಕಳ ರಕ್ಷಣೆ ವಿಷಯದಲ್ಲಿ ಸಮಿತಿಯ ಸಭೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಅವರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಸಮಿತಿ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹೆಸರಿಗೆ ಮಾತ್ರ ಸಭೆ ನಡೆಸಲಾಗುತ್ತಿದೆ’ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

239 ಪ್ರಕರಣ: 2025ರ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯಕ್ಕೆ ನಡೆದ ಸಮಿತಿಯ ಸಭೆಗಳಲ್ಲಿ 239 ಪ್ರಕರಣಗಳು ಚರ್ಚೆಗೆ ಬಂದಿವೆ. ಈ ಪೈಕಿ ಬಾಲ ಮಂದಿರಗಳಲ್ಲಿ ಇದ್ದ 205 ಮಕ್ಕಳನ್ನು ಪುನಃ ಪೋಷಕರ ವಶಕ್ಕೆ ಬಿಡುಗಡೆ ಮಾಡಲಾಗಿದೆ. 18 ಪ್ರಕರಣಗಳನ್ನು ಇತರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. 16 ಪ್ರಕರಣಗಳು ವಿಲೇವಾರಿಗಾಗಿ ಕಾದಿವೆ.

ಆರೈಕೆ ರಕ್ಷಣೆಗೆ ಒತ್ತು

ಮಕ್ಕಳ ಕಲ್ಯಾಣ ಸಮಿತಿ ಸಭೆಗಳು ಸಕಾಲಕ್ಕೆ ನಡೆಯುತ್ತಿವೆ. ಮಕ್ಕಳ ಆರೈಕೆ ರಕ್ಷಣೆ ಪುನರ್ವಸತಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ದಿನ ಬಾಲ ಮಂದಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆರ್‌.ಜಿ.ಪವಿತ್ರಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.