ADVERTISEMENT

ಶಿರಾ: ಮಕ್ಕಳ ಹಕ್ಕುಗಳ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 5:26 IST
Last Updated 6 ಜನವರಿ 2024, 5:26 IST
ಶಿರಾ ತಾಲ್ಲೂಕಿನ ತರೂರು ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಗ್ರಾ.ಪಂ ಅಧ್ಯಕ್ಷೆ ಪುಷ್ಪಲಕ್ಷ್ಮಿ ಉದ್ಘಾಟಿಸಿದರು
ಶಿರಾ ತಾಲ್ಲೂಕಿನ ತರೂರು ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಗ್ರಾ.ಪಂ ಅಧ್ಯಕ್ಷೆ ಪುಷ್ಪಲಕ್ಷ್ಮಿ ಉದ್ಘಾಟಿಸಿದರು   

ಶಿರಾ: ‘ಸರ್ ನಮ್ಮ ತಂದೆತಾಯಿ ಇಬ್ಬರೂ ನಿಧನರಾಗಿದ್ದಾರೆ. ಈ ಸಂಕಷ್ಟದ ನಡುವೆಯೂ ನಾವು ಶಿಕ್ಷಣ ಮುಂದುವರೆಸಿದ್ದೇವೆ. ಹಳ್ಳಿಯಲ್ಲಿ ವಾಸಕ್ಕೆ ಸ್ವಂತ ಮನೆಯಿಲ್ಲ. ಆದ್ದರಿಂದ ನಮಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡಿ’ ಎಂದು ತರೂರು ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನಾ ಮನವಿ ಮಾಡಿದರು.

ತಾಲ್ಲೂಕಿನ ತರೂರು ಗ್ರಾಮ ಪಂಚಾಯಿತಿ, ಬೆಂಗಳೂರು ಚೈಲ್ಡ್ ರೈಟ್ ಟ್ರಸ್ಟ್ ಹಾಗೂ ಸಿಎಂಸಿಎ ಸಂಸ್ಥೆ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

ಗಂಜಲಗುಂಟೆ ಅಂಗನವಾಡಿ ಕಾರ್ಯಕರ್ತೆ ಹೇಮಾ ಮಾತನಾಡಿ, ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ. ಶಾಲೆಯ ಒಂದು ನಿರುಪಯುಕ್ತ ಕೊಠಡಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ. ಆ ಕೊಠಡಿ ಸಹ ಮಕ್ಕಳನ್ನು ಕೂರಿಸಲು ಅಪಾಯಕಾರಿಯಾಗಿದೆ. ಕೇಂದ್ರದ ಹೊರಗಡೆ ಮಕ್ಕಳಿಗೆ ಊಟ, ಪಾಠ ಎಲ್ಲವನ್ನು ನಡೆಸಲಾಗುತ್ತಿದೆ. ಇಲಾಖೆಯಿಂದ ಕಟ್ಟಡ ಕಟ್ಟಲು ಅನುಮೋದನೆಯಾಗಿದ್ದರೂ ಯಾವುದೇ ಜನಪ್ರತಿನಿಧಿಗಳು ಕಟ್ಟಡ ಕಟ್ಟಿಕೊಡಲು ಮುಂದೆ ಬರುತ್ತಿಲ್ಲ. ಕೂಡಲೇ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಂಜುನಾಥ್ ಅಮಲಗೊಂದಿ ಮಾತನಾಡಿ, ಸಭೆಯಲ್ಲಿ ಮಕ್ಕಳೂ ವೈಯಕ್ತಿಕ ಹಾಗೂ ತಮ್ಮ ಹಳ್ಳಿಯ ಮತ್ತು ಶಾಲೆಯ ಸಮಸ್ಯೆ ಚರ್ಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಬೇಕು ಎಂದರು.

ಮಕ್ಕಳು ಅವರ ಶಾಲೆಗಳಿಗೆ ಶಿಕ್ಷಕರ ನೇಮಕ, ರಸ್ತೆ ದುರಸ್ತಿ, ಶಾಲೆಗೆ ನೀರು ಪೂರೈಕೆ, ಶಾಲಾ ಕೊಠಡಿ ದುರಸ್ತಿ, ಆಟದ ಮೈದಾನ ಮತ್ತು ಕಾಂಪೌಂಡ್, ಶೌಚಾಲಯ ಹಾಗೂ ಅಂಗನವಾಡಿಗೆ ಮೂಲಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಒಟ್ಟು 9 ಶಾಲೆಗಳಿಂದ 200ಕ್ಕೂ ಹೆಚ್ಚು ಮಕ್ಕಳು, 5 ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಒಟ್ಟು 35 ಸಮಸ್ಯೆ ಹೇಳಿಕೊಂಡರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು‌.

ಗ್ರಾ.ಪಂ ಅಧ್ಯಕ್ಷೆ ಪುಷ್ಪಲಕ್ಷ್ಮೀ ಮಕ್ಕಳ ಹಕ್ಕುಗಳ ಗ್ರಾಮಸಭೆಗೆ ಚಾಲನೆ ನೀಡಿದರು.

ನೋಡಲ್ ಅಧಿಕಾರಿಗಳಾದ ಮಂಜುಪ್ರಸಾದ್, ಪಿಡಿಒ ಹನುಮಂತರಾಯಪ್ಪ, ಸಿಆರ್‌ಪಿ ಸುರೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ಗೋಪಿನಾಥ್, ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕೆ.ಎಸ್.ಸಿದ್ದೇಶ್, ಗ್ರಾ.ಪಂ ಸದಸ್ಯರಾದ ತಿಪ್ಪೇಸ್ವಾಮಿ, ನಾಗಣ್ಣ, ರಾಮಕ್ಕ, ನವ್ಯ, ಶಿಕ್ಷಕ ಹನುಮಂತರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.