ಶಿರಾ: ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದಲ್ಲಿ ಬಸ್ ನಿಲ್ಲಿಸಲು ಸೂಚನಾ ಫಲಕ ಹಾಕಿದ್ದರೂ ಶಿರಾ ಘಟಕದ ಬಸ್ ನಿಲ್ಲಿಸುತ್ತಿಲ್ಲ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು, ಹಿರಿಯರಿಗೆ ಕಷ್ಟವಾಗುತ್ತಿದೆ. ಬಸ್ ನಿಲುಗಡೆ ಮಾಡುವಂತೆ ಜೋಗಿಹಳ್ಳಿ ಗ್ರಾಮದ ಮಕ್ಕಳು ಮನವಿ ಮಾಡಿದರು.
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಸೀಬಿಅಗ್ರಹಾರ ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.
ಶಾಲೆಗಳಿಗೆ ಫ್ಯಾನ್ ನೀಡುವಂತೆ, ಕಂಪ್ಯೂಟರ್ ಶಿಕ್ಷಕರ ನೇಮಕ, ಕುಡಿಯುವ ನೀರು, ಶಾಲಾ ಕೊಠಡಿಗಳ ದುರಸ್ತಿ, ಆಟದ ಮೈದಾನ ಮತ್ತು ಕಾಂಪೌಂಡ್ ನಿರ್ಮಾಣ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು, ಗ್ರಾಮದಲ್ಲಿನ ಚರಂಡಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರು.
ಪಂಚಾಯಿತಿ ವ್ಯಾಪ್ತಿಯ 8 ಶಾಲೆಗಳು 83 ಮಕ್ಕಳು ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಹೇಳಿಕೊಂಡರು.
ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಂಜುನಾಥ್ ಅಮಲಗೊಂದಿ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ 35ರಷ್ಟು ಮಕ್ಕಳಿದ್ದಾರೆ. 5 ವರ್ಷದೊಳಗಿನ ಮಕ್ಕಳಲ್ಲಿ ಶೇ 66ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವುದು ನೋವಿನ ವಿಷಯವಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಚಿದಾನಂದ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಪಂಚಾಯಿತಿ ಬದ್ಧವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಕೆ.ಗೀತಾ, ಪಿಡಿಒ ಲೋಕೇಶ್, ಕುಮಾರಸ್ವಾಮಿ, ಸದಸ್ಯ ಕೆ.ಎಲ್.ಗಂಗಣ್ಣ, ಚಿಕ್ಕರಂಗಯ್ಯ, ಗಂಗಮ್ಮ, ಕೆಂಪಯ್ಯ, ಸಿಎಂಸಿಎ ಸಂಸ್ಥೆಯ ವೆಂಕಟೇಶ್, ಸ್ವರೂಪ್, ಅಂಬಿಕಾ, ಶ್ರೀನಿವಾಸ್, ನಿಂಗರಾಜು, ಲೀಲಾವತಿ, ಶ್ವೇತಾ, ಕುಮಾರ್, ಛಾಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.