ADVERTISEMENT

ತುಮಕೂರು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಕ್ರೈಸ್ತ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 2:41 IST
Last Updated 26 ಡಿಸೆಂಬರ್ 2021, 2:41 IST
ತುಮಕೂರಿನ ಸಿಎಸ್‍ಐ ವೆಸ್ಲಿ ಚರ್ಚ್‌ನಲ್ಲಿ ಶನಿವಾರ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು
ತುಮಕೂರಿನ ಸಿಎಸ್‍ಐ ವೆಸ್ಲಿ ಚರ್ಚ್‌ನಲ್ಲಿ ಶನಿವಾರ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು   

ತುಮಕೂರು: ಕ್ರಿಸ್‍ಮಸ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಸಿಎಸ್‍ಐ ವೆಸ್ಲಿ ಚರ್ಚ್‌, ಹೊರಪೇಟೆ ಸಂತ ಲೂರ್ದುಮಾತೆ ಚರ್ಚ್‌, ಸಿಎಸ್‍ಐ ಲೇಔಟ್‍ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಶಿರಾ ಗೇಟ್‍ನಲ್ಲಿರುವ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್‍ಗಳಲ್ಲಿ ಕ್ರೈಸ್ತ ಸಮುದಾಯದವರು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ಹಬ್ಬದ ಪ್ರಯುಕ್ತ ಚರ್ಚ್‍ಗಳನ್ನು ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದವು. ಹೊಸ ಉಡುಪುಗಳನ್ನು ಧರಿಸಿ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿ, ಕೇಕ್‌ಗಳನ್ನು ಹಂಚಿ ತಿನ್ನುವ ಮೂಲಕ ಸೌಹಾರ್ದತೆಯ ಸಂಕೇತ ಸಾರಿದರು. ಎಲ್ಲಾ ಚರ್ಚ್‍ಗಳಲ್ಲಿ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಸಿಎಸ್‍ಐ ವೆಸ್ಲಿ ಚರ್ಚ್‌ ಸಭಾಪಾಲಕ ಮಾರ್ಗನ್ ಸಂದೇಶ್, ‘ಏಸು ಕ್ರಿಸ್ತನ ಜನ್ಮದಿನದ ಸಂಕೇತವಾಗಿಕ್ರಿಸ್‍ಮಸ್ ಹಬ್ಬ ಆಚರಿಸಲಾಗುತ್ತದೆ. ಮನುಷ್ಯರಿಗೋಸ್ಕರ ದೇವರು ಪರ ಲೋಕವನ್ನು ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುವಂತಹದ್ದು. ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಈ ಹಬ್ಬದ ಉದ್ದೇಶ’ಎಂದು ತಿಳಿಸಿದರು.

ಕ್ರಿಸ್‍ಮಸ್ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ ಬಂದಂತಹ ಏಸುವಿನ ಆಗಮನವನ್ನು ಸೂಚಿಸುತ್ತದೆ. ಕ್ರಿಸ್‌ಮಸ್‌ ಶಾಂತಿ, ಸಮಾಧಾನದ ಹಬ್ಬ. ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.