ADVERTISEMENT

ಗ್ರಾಮೀಣ ಅಭಿವೃದ್ಧಿ ಕೇಂದ್ರಿತ ತಂತ್ರಜ್ಞಾನಕ್ಕೆ ಒತ್ತು ಕೊಡಿ: ಡಾ.ಸಿದ್ಧರಾಮಪ್ಪ

ಸಿಐಟಿ ಕಾಲೇಜಿನಲ್ಲಿ ಗ್ರಾಮೀಣಾಭಿವೃದ್ಧಿಗೆ ತಂತ್ರಜ್ಞಾನ ವಿಷಯ ಕುರಿತ ರಾಷ್ಟ್ರೀಯ ಮಟ್ಟದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:43 IST
Last Updated 13 ಅಕ್ಟೋಬರ್ 2018, 12:43 IST
ಸಮ್ಮೇಳನವನ್ನು ಡಾ.ಸಿದ್ಧರಾಮಪ್ಪ ಉದ್ಘಾಟಿಸಿದರು.ಡಾ.ಡಿ.ಎಸ್.ಸುರೇಶ್,ಡಾ.ಶಾಂತಲಾ,ಡಾ.ಮಂಜಪ್ಪ ಸಾರಥಿ ಇದ್ದರು
ಸಮ್ಮೇಳನವನ್ನು ಡಾ.ಸಿದ್ಧರಾಮಪ್ಪ ಉದ್ಘಾಟಿಸಿದರು.ಡಾ.ಡಿ.ಎಸ್.ಸುರೇಶ್,ಡಾ.ಶಾಂತಲಾ,ಡಾ.ಮಂಜಪ್ಪ ಸಾರಥಿ ಇದ್ದರು   

ತುಮಕೂರು: ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಪಟ್ಟಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಕಡೆಗೆ ಒತ್ತು ಕೊಡಬೇಕು ಎಂದು ಚಿಕ್ಕೋಡಿಯ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸಿದ್ಧರಾಮಪ್ಪ ಹೇಳಿದರು.

ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಿದ್ದ ‘ ಗ್ರಾಮೀಣಾಭಿವೃದ್ಧಿಗೆ ತಂತ್ರಜ್ಞಾನ’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

’ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರು ಹೊಸ ಆವಿಷ್ಕಾರಗಳತ್ತ ಗಮನಹರಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶ ಹೀಗೆ ಎಲ್ಲರಿಗೂ ತಂತ್ರಜ್ಞಾನದ ಅನುಕೂಲತೆಗಳು ಲಭಿಸಬೇಕು’ ಎಂದು ಹೇಳಿದರು.

ADVERTISEMENT

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ಮತ್ತು ಸಲಹಾ ವಿಭಾಗದ ನಿರ್ದೇಶಕ ಡಾ.ಮಂಜಪ್ಪ ಸಾರಥಿ ಮಾತನಾಡಿ,‘ ಭವ್ಯ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನದ ಕೊಡುಗೆ ಅಪಾರವಾದುದು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿಗಳು ತಂತ್ರಜ್ಞಾನದ ನೆರವಿನಿಂದ ಆಗಿವೆ. ಆ ಮೂಲಕ ಭಾರತದಲ್ಲಿ ಆಮೂಲಾಗ್ರ ಅಭಿವೃದ್ಧಿಗೆ ಸಾಧ್ಯವಾಯಿತು’ ಎಂದು ತಿಳಿಸಿದರು.

ಸಿಐಟಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಶಾಂತಲಾ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡುವುದರಲ್ಲಿ ನಮ್ಮ ಕಾಲೇಜು ಪ್ರಯತ್ನ ಮಾಡುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಸ್.ಸುರೇಶ್ ಮಾತನಾಡಿ, ‘ಕಾಲೇಜಿಗೆ ಕರ್ನಾಟಕದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜು– ಗ್ರಾಮೀಣ ಪ್ರದೇಶ, ಭಾರತದ ಶ್ರೇಷ್ಠ ಗ್ರಾಮೀಣ ಎಂಜಿನಿಯರಿಂಗ್ ಕಾಲೇಜು ಪ್ರಶಸ್ತಿಗಳು ಲಭಿಸಿದ್ದು, ಇದು ನಮ್ಮ ಕಾಲೇಜಿಗೆ ಇನ್ನಷ್ಟು ಹೊಣೆಗಾರಿಕೆ ಹೆಚ್ಚಿಸಿದೆ’ ಎಂದು ತಿಳಿಸಿದರು.

ಸಿಐಟಿ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಬಸವರಾಜ್, ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ.ಬಿ.ಜ್ಯೋತಿಗಣೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.