ADVERTISEMENT

ಏಕರೂಪದ ಅಧಿಕೃತ ಗುರುತಿನ ಚೀಟಿ ನೀಡಿ: ಬಿ.ಎನ್.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:29 IST
Last Updated 17 ಡಿಸೆಂಬರ್ 2025, 5:29 IST
<div class="paragraphs"><p>ತುರುವೇಕೆರೆ ತಾಲ್ಲೂಕು ಪತ್ರಬರಹಗಾರರು ಸಬ್ ರಿಜಿಸ್ರ್ಟಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು</p></div>

ತುರುವೇಕೆರೆ ತಾಲ್ಲೂಕು ಪತ್ರಬರಹಗಾರರು ಸಬ್ ರಿಜಿಸ್ರ್ಟಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು

   

ತುರುವೇಕೆರೆ: ನೋಂದಣಿಗೆ ಸಂಬಂಧಿಸಿದಂತೆ ಕಾವೇರಿ 2 ತಂತ್ರಾಂಶದ ಅಡಿಯಲ್ಲಿ ಸಿಟಿಜನ್‌ ಲಾಗಿನ್‌ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಇದರಿಂದ ಪತ್ರಬರಹಗಾರರ ಬದುಕು ಬೀದಿಗೆ ಬೀಳಲಿದೆ. ಕೂಡಲೇ ಆ ವ್ಯವಸ್ಥೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ತಾಲ್ಲೂಕಿನ ಪತ್ರಬರಹಗಾರರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನೋಂದಣಿ ಇಲಾಖೆಯಲ್ಲಿ ಸುಧಾರಣೆ ತರುವ ನೆಪದಲ್ಲಿ ಪತ್ರಬರಹಗಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಈಗ ಕಾವೇರಿ 2 ತಂತ್ರಾಂಶದ ಅಡಿಯಲ್ಲಿ ಸಿಟಿಜನ್‌ ಲಾಗಿನ್‌ ವ್ಯವಸ್ಥೆಯನ್ನು ಮಾಡಿರುವುದು ಸರಿಯಲ್ಲ. ಇದರಿಂದಾಗಿ ರಾಜ್ಯದಲ್ಲಿರುವ ಸುಮಾರು 16 ಸಾವಿರ ಪತ್ರಬರಹಗಾರರ ಕುಟುಂಬ ಬೀದಿಗೆ ಬೀಳಲಿದೆ. ಅಲ್ಲದೇ ಅವರನ್ನೇ ನಂಬಿಕೊಂಡಿರುವ ವಿವಿಧ ಉದ್ಯೋಗಿಗಳೂ ನಿರುದ್ಯೋಗಿಗಳಾಗಲಿದ್ದಾರೆ ಎಂದು ಜಿಲ್ಲಾ ಬರಹಗಾರರ ಸಂಘದ ಸಂಘಟನಾ ಸಂಚಾಲಕ ಬಿ.ಎನ್.ಮಂಜುನಾಥ್‌ (ಪಾಪು) ಆರೋಪಿಸಿದ್ದಾರೆ.

ADVERTISEMENT

ಸಿಟಿಜನ್‌ ಲಾಗಿನ್‌ನನ್ನು ಸಾಮಾನ್ಯ ಜನರು ಬಳಸುತ್ತಿಲ್ಲ. ಅದರ ಬದಲಾಗಿ ಡಿಟಿಪಿ ಸೆಂಟರ್‌, ಸೈಬರ್‌ ಸೆಂಟರ್ ಮತ್ತು ಕಂಪ್ಯೂಟರ್‌ ಸೆಂಟರ್‌ನವರ ಬಳಸಿ ಸರ್ಕಾರದ ಉದ್ದೇಶ ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ತಾವೇ ನೋಂದಣಿ ಮಾಡಿಸುವುದಾಗಿ ರಾಜಾರೋಷವಾಗಿ ನಾಮಫಲಕ ಹಾಕುವ ಅಂಗಡಿಯವರು ಜನರಿಗೆ ನಾಮ ಹಾಕುತ್ತಿದ್ದಾರೆ. ಇವರು ಕಾನೂನು ಬಾಹಿರವಾಗಿ ಮತ್ತು ಅವೈಜ್ಞಾನಿಕವಾಗಿ ಪತ್ರ ತಯಾರಿಸುತ್ತಿದ್ದಾರೆ. ಸರ್ಕಾರವೇ ಅನಧಿಕೃತ ಮತ್ತು ಮಧ್ಯವರ್ತಿಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಮಂಜುನಾಥ್‌
ಕಿಡಿಕಾರಿದರು.

ಕಾವೇರಿ ತಂತ್ರಾಂಶ 3 ಎಂಬ ಹೆಸರಿನಲ್ಲಿ ಮತ್ತೊಂದು ಅಧ್ವಾನಕ್ಕೆ ಕಾರಣವಾಗುತ್ತಿದೆ. ಈ ತಂತ್ರಾಂಶದಲ್ಲಿ ಚರ ಮತ್ತು ಸ್ಥಿರಾಸ್ತಿ ನೋಂದಣಿ ವೇಳೆ ಫಲಾನುಭವಿಗಳ ಫೇಸ್‌ಲೆಸ್‌ ಮತ್ತು ಪೇಪರ್‌ಲೆಸ್‌ ತಂತ್ರಾಂಶ ಅಳವಡಿಸಲಾಗುವುದು ಎಂಬ ಅಂಶ ಹರಿದಾಡುತ್ತಿದೆ. ಈ ತಂತ್ರಾಂಶ ಜಾರಿಯಾದರೆ ಸುಳ್ಳು, ಮೋಸ ಮತ್ತು ವಂಚನೆಯ ನೋಂದಣಿ ಹೆಚ್ಚಾಗಿ ಇಡೀ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂದರು.

ರಾಜ್ಯದ ಎಲ್ಲ ಪತ್ರಬರಹಗಾರರಿಗೆ ಪ್ರತ್ಯೇಕ ಲಾಗಿನ್‌ ನೀಡಬೇಕು. ನೋಂದಣಿಯಾಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರಬರಹಗಾರರು, ವಕೀಲರ ಸಹಿ, ಮೊಹರು, ಪರವಾನಗಿ ಬಾರ್‌ ಕೌನ್ಸಿಲ್‌ ಸಂಖ್ಯೆ ನಮೂದಾಗಿರುವುದು ಕಡ್ಡಾಯ ಮಾಡಬೇಕು. ರಾಜ್ಯದಾದ್ಯಂತ ಇರುವ ಪತ್ರ ಬರಹಗಾರರಿಗೆ ಸರ್ಕಾರ ಮಾನ್ಯತೆ ಇರುವ ಏಕರೂಪದ ಅಧಿಕೃತ ಗುರುತಿನ ಚೀಟಿ ನೀಡಬೇಕು ಎಂದು ರಮೇಶ್‌ ಆಗ್ರಹಿಸಿದರು.

ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ ಎನ್. ಎ.ಕುಂಇ ಅಹಮದ್‌ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಗೌರವಾಧ್ಯಕ್ಷ ಕೆ.ಎಲ್.ಶಿವಕುಮಾರ್‌, ಉಪಾಧ್ಯಕ್ಷ ಬಿ.ಜೆ.ಶಿವಕುಮಾರ್‌, ಪರಮೇಶ್‌, ಕಾರ್ಯದರ್ಶಿ ಕೆ.ಟಿ.ಪುಟ್ಟಸ್ವಾಮಿಗೌಡ, ಖಜಾಂಚಿ ಟಿ.ಜಿ.ಶಿವಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ.ಎ.ಹರೀಶ್‌, ಕೆ.ಗೋಪಿನಾಥ್‌, ಬಿ.ಎನ್.ಶಶಿಕುಮಾರ್‌, ಜಗದೀಶ್, ಕೆ.ಎಲ್.ಕಲ್ಲೇಶ್‌, ಬಿ.ಕಂಚೀರಾಯ, ಬಸವರಾಜು, ಬಲರಾಮಯ್ಯ, ಶಿವಕುಮಾರ್‌, ಡಿ.ಎಸ್.ಶಿವಣ್ಣ, ಪುಟ್ಟರಾಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.