ತುಮಕೂರು: ಕಾರ್ಮಿಕ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ನೇಮಕ, ಇಎಸ್‌ಐ ಚಿಕಿತ್ಸಾಲಯದಲ್ಲಿ ಔಷಧಿ ವಿತರಣೆಗೆ ಆಗ್ರಹಿಸಿ ಸಿಐಟಿಯು ವತಿಯಿಂದ ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.
‘ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ, ಪಿ.ಎಫ್ ಕಚೇರಿಯಲ್ಲಿ ಆಯುಕ್ತರಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಔಷಧಿ ವಿತರಣೆಯೂ ಸರಿಯಾಗಿ ಆಗುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.
ಸಿಐಟಿಯು ತಾಲ್ಲೂಕು ಸಂಚಾಲಕ ರಂಗಧಾಮಯ್ಯ ‘ಗುತ್ತಿಗೆ ಕಾರ್ಮಿಕರ ಕಾಯಮಾತಿ, ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕಾರ್ಮಿಕರ ಭವಿಷ್ಯನಿಧಿ ಕಚೇರಿಯಲ್ಲಿ ಹಲವು ತಿಂಗಳಿನಿಂದ ಆಯುಕ್ತರ ಹುದ್ದೆ ಖಾಲಿ ಇದೆ. ಇದರಿಂದ ಸಾವಿರಾರು ಕಾರ್ಮಿಕರ, ಪಿಂಚಣಿದಾರರ ಕೆಲಸ ವಿಳಂಬವಾಗುತ್ತಿದೆ. ಅರ್ಜಿ ಇತ್ಯರ್ಥವಾಗದೆ ತುಂಬಾ ಸಮಸ್ಯೆಯಾಗುತ್ತಿದೆ’ ಎಂದರು.
ಕಾರ್ಮಿಕರ ಅಧಿಕಾರಿ ಕೆ.ತೇಜಾವತಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಎ.ಲೋಕೇಶ್, ಕುಮಾರ್, ಮಂಜುನಾಥ್, ಶ್ರೀನಿವಾಸ್, ಪ್ರಕಾಶ್, ಟಿ.ಆರ್.ಕಲ್ಪನಾ, ಇಬ್ರಾಹಿಂ ಕಲೀಲ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.