ADVERTISEMENT

ಶಿರಾ | ಸ್ವಚ್ಛತೆ ಮರೀಚಿಕೆ: ಜನರ ಆಕ್ರೋಶ

ಶಿರಾ ನಗರಸಭೆ ಕಾರ್ಯವೈಖರಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 6:38 IST
Last Updated 20 ಡಿಸೆಂಬರ್ 2022, 6:38 IST
ಶಿರಾದ ವಿದ್ಯಾನಗರದ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳು
ಶಿರಾದ ವಿದ್ಯಾನಗರದ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳು   

ಶಿರಾ: ನಗರಸಭೆ ಅಧಿಕಾರಿಗಳ ದಿವ್ಯನಿರ್ಲಕ್ಷ್ಯದಿಂದ ನಗರದ ವ್ಯಾಪ್ತಿ ಯಲ್ಲಿ ಸ್ವಚ್ಛತೆ ಮರೀಚಿಕೆ ಯಾಗಿದ್ದು, ಸೌಂದರ್ಯಕ್ಕೂ ಕಪ್ಪುಚುಕ್ಕೆ ಯಾಗಿದೆ.

ಬಹುತೇಕ ಕಡೆ ರಸ್ತೆ ಪಕ್ಕ ಹಾಗೂ ಖಾಲಿ ನಿವೇಶನಗಳಲ್ಲಿ ಗಿಡಗಂಟೆಗಳು ಬೆಳೆದಿದ್ದು ವಿಷಜಂತುಗಳ ಆವಾಸ ಸ್ಥಾನವಾಗಿವೆ. ನಿವೇಶನದ ಅಕ್ಕಪಕ್ಕದಲ್ಲಿರುವ ಮನೆಯವರು ರಾತ್ರಿ ವೇಳೆ ಭಯದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.

ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದಸ್ಯರು ತಾವು ವಾಸವಾಗಿರುವ ಹಾಗೂ ತಮಗೆ ಬೇಕಾದ ಕಡೆ ಮಾತ್ರ ಖಾಲಿ ನಿವೇಶನ ಗಳನ್ನು ಸ್ವಚ್ಛಗೊಳಿಸಿದ್ದು ಉಳಿದೆಡೆ ಯಾವುದೇ ಗಮನ ನೀಡುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

ADVERTISEMENT

ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಸೇರಿದಂತೆ ಹಲವಾರು ಮುಳ್ಳಿನ ಗಿಡಗಳು ಪಕ್ಕದಲ್ಲಿರುವ ಮನೆಗಳೇ ಕಾಣದಂತೆ ಬೆಳೆದು ನಿಂತಿವೆ.

ಚರಂಡಿಗಳ ಪಕ್ಕದಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು ಚರಂಡಿಗಳೇ ಕಾಣದಂತಾಗಿವೆ. ಈ ಹಿನ್ನೆಲೆಯಲ್ಲಿ ಚರಂಡಿ ಸ್ವಚ್ಛಗೊಳಿಸು ವುದನ್ನೇ ಬಹುತೇಕ ಕಡೆ ಕೈಬಿಡಲಾಗಿದೆ.

ಗಿಡಗಂಟೆಗಳು ಬೆಳೆದಿರುವ ನಿವೇಶನಗಳಲ್ಲಿ ಜನರು ಕಸ ತಂದು ಹಾಕುತ್ತಿರುವುದರಿಂದ ಹಂದಿಗಳ ವಾಸ ಸ್ಥಳವಾಗುತ್ತಿವೆ. ಹಂದಿ ಮತ್ತು ನಾಯಿಗಳು ಕಸವನ್ನು ದಾರಿಯಲ್ಲಿ ಎಳೆದು ತಂದು ಹಾಕುವುದರಿಂದ ಓಡಾಡಲು ಕಷ್ಟವಾಗುತ್ತಿದೆ. ಜೊತೆಗೆ, ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದ್ದು, ನಗರ ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುವಂತಾಗಿದೆ.

ರಸ್ತೆಯಲ್ಲಿ ಬರುವ ಮಕ್ಕಳು ಮತ್ತು ವಯಸ್ಸಾದವರ ಮೇಲೆ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸುವ ಪ್ರಕರಣಗಳು ಹೆಚ್ಚುತ್ತಿದ್ದರೂ, ನಗರಸಭೆ ತಲೆಕೆಡಿಸಿಕೊಳ್ಳದೆ ಮೌನವಾಗಿರುವುದು ನಾಗರಿಕರ ಸಂಕಷ್ಟವನ್ನು ಹೆಚ್ಚಿಸಿದೆ.

ಸ್ವಚ್ಛತೆ ಇಲ್ಲದಿರುವುದರಿಂದ ಸೊಳ್ಳೆ ಕಾಟವೂ ಹೆಚ್ಚಾಗಿದೆ. ಈ ಬಗ್ಗೆ ಯಾರು ಗಮನ ನೀಡುತ್ತಿಲ್ಲ. ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದ್ದರೂ ಗಮನ ಹರಿಸುತ್ತಿಲ್ಲ. ಸ್ವಚ್ಛತೆ ಹೆಸರಿನಲ್ಲಿ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಸ್ವಚ್ಛತೆ ಕೇವಲ ದಾಖಲೆಗೆ ಸೀಮಿತ ವಾಗುತ್ತಿದೆ. ಅಧಿಕಾರಿಗಳೇ ಕಾಳಜಿವ ಹಿಸದಿರುವುದು ಶೋಚನೀಯ. ಈ ಬಗ್ಗೆ ಗಮನ ನೀಡಬೇಕಿದ್ದ ಅಧಿಕಾರಿಗಳು ಈಗ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುವುದು ಜನತೆಯ ಆಕ್ರೋಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.