ADVERTISEMENT

16ರಂದು ಚಿಕ್ಕನಾಯಕನಹಳ್ಳಿಗೆ ಸಿಎಂ ಬೊಮ್ಮಾಯಿ ಭೇಟಿ

ಫಲಾನುಭವಿಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 15:22 IST
Last Updated 10 ಮಾರ್ಚ್ 2023, 15:22 IST

ತುಮಕೂರು: ಫಲಾನುಭವಿಗಳ ಸಮಾವೇಶ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ 16ರಂದು ಚಿಕ್ಕನಾಯಕನಹಳ್ಳಿಗೆ ಭೇಟಿ ನೀಡಲಿದ್ದಾರೆ.

ವಿವಿಧ ಯೋಜನೆಯಡಿ ಆಯ್ಕೆಯಾಗಿರುವ ಸುಮಾರು 5 ಸಾವಿರ ಮಂದಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

ನಗರದ ಜಿ.ಪಂ ಕಚೇರಿಯಲ್ಲಿ ಶುಕ್ರವಾರ ಸಮಾವೇಶದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ADVERTISEMENT

ಚಿಕ್ಕನಾಯಕನಹಳ್ಳಿ ಪಟ್ಟಣದ ಪರಿವೀಕ್ಷಣಾ ಮಂದಿರದ ಬಳಿ ಇರುವ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಸತಿ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ತಾಲ್ಲೂಕು ಆಡಳಿತ ಸೌಧ, ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರ, ಪೌರಾಡಳಿತ ಕಟ್ಟಡ ಒಳಗೊಂಡಂತೆ ವಿವಿಧ ಕಟ್ಟಡ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ವಾಹನಗಳ ಪಾರ್ಕಿಂಗ್‌, ಆಂಬುಲೆನ್ಸ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಹೇಮಲತಾ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರವೀಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಡಿಎಚ್‌ಒ ಡಾ.ಡಿ.ಎನ್‌. ಮಂಜುನಾಥ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.