ADVERTISEMENT

ಕೊಬ್ಬರಿ ಬೆಲೆ ಕುಸಿತ; ರೈತರು ಕಂಗಾಲು

ತಿಪಟೂರು ಮಾರುಕಟ್ಟೆಯಲ್ಲಿ ಪ್ರತಿ ಹರಾಜಿಗೂ ಕುಸಿಯುತ್ತಲೇ ಇದೆ ಕೊಬ್ಬರಿ ಬೆಲೆ

ಡಿ.ಎಂ.ಕುರ್ಕೆ ಪ್ರಶಾಂತ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ಕೊಬ್ಬರಿ ರಾಶಿ
ಕೊಬ್ಬರಿ ರಾಶಿ   

ತುಮಕೂರು: ಏಷ್ಯಾದ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿರುವ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿಯುತ್ತಲೇ ಇದೆ.

ಮಾರುಕಟ್ಟೆಯಲ್ಲಿ ಬುಧವಾರ ಮತ್ತು ಶನಿವಾರ ಕೊಬ್ಬರಿ ಹರಾಜು ನಡೆಯುತ್ತದೆ. ಮೇ ತಿಂಗಳಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ ₹ 16,500 ಇತ್ತು. ಈ ಬೆಲೆ ಹಂತ ಹಂತವಾಗಿ ಇಳಿಯುತ್ತಲೇ ಇದೆ. ಪ್ರತಿ ಹರಾಜಿನಲ್ಲಿ ₹ 200ರಿಂದ 300ರಷ್ಟು ಬೆಲೆ ಕುಸಿಯುತ್ತಿದೆ.

ನ.9ರ ಶನಿವಾರ ವರ್ತಕರು ಕ್ವಿಂಟಲ್ ಕೊಬ್ಬರಿಯನ್ನು ₹ 12,533ಕ್ಕೆ ಖರೀದಿಸಿದ್ದರು. ನ.20ರಂದು ₹ 11,666ಕ್ಕೆ ಖರೀದಿಸಿದ್ದಾರೆ. ಹೀಗೆ ಕೇವಲ 11 ದಿನಗಳಲ್ಲಿ ಕೊಬ್ಬರಿ ಬೆಲೆ ₹ 1 ಸಾವಿರ ಕುಸಿತ ಕಂಡಿದೆ.

ADVERTISEMENT

ದಿಢೀರ್ ಬೆಲೆ ಕುಸಿತದ ಪರಿಣಾಮಗಳು ವರ್ತಕರು ಮತ್ತು ರೈತರ ಮೇಲೆ ದೊಡ್ಡ ಮಟ್ಟದಲ್ಲಿಯೇ ಆಗುತ್ತದೆ. ಆದರೆ ಈ ಸಣ್ಣ ಮಟ್ಟದ ಕುಸಿತದಿಂದ ರೈತರಿಗೆ ಹೊಡೆತ ಬೀಳುತ್ತಿದೆ ಎನ್ನುವರು ಕೊಬ್ಬರಿ ವ್ಯಾಪಾರ ವಹಿವಾಟಿನ ಆಳ ಬಲ್ಲವರು.

ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕಿನ ರೈತರ ಆರ್ಥಿಕ ಬದುಕು ಪ್ರಧಾನವಾಗಿ ಅವಲಂಬಿಸಿರುವುದೇ ತೆಂಗು ಮತ್ತು ಕೊಬ್ಬರಿಯ ಮೇಲೆ. ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಯ ರೈತರು ಸಹ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟ ಮಾಡುವರು. ಈಗಾಗಲೇ ಬರ ಮತ್ತು ಕೊಳವೆಬಾವಿಗಳಲ್ಲಿ ನೀರಿನ ಕೊರತೆಯಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ಈ ಬೆಲೆ ಕುಸಿತ ದೊಡ್ಡ ಮಟ್ಟದಲ್ಲಿಯೇ ಪೆಟ್ಟು ನೀಡುತ್ತಿದೆ.

ಸಾಮಾನ್ಯವಾಗಿ ರೈತರು ಪ್ರತಿ ಹರಾಜು ಗಮನಿಸಿಯೇ ಕೊಬ್ಬರಿ ಸುಲಿಸುವುದು. ಕೊಬ್ಬರಿಯನ್ನು ಮಂಡಿಗೆ ಹಾಕಿದರೂ ಮುಂದಿನ ಹರಾಜು ನೋಡಿ ಕೊಬ್ಬರಿ ತೀರಿಸುವರು (ಮಾರಾಟ). ಹೀಗೆ ಕೊಬ್ಬರಿಯನ್ನು ಮಂಡಿಗೆ ಬಿಟ್ಟವರು, ಈಗಾಗಲೇ ಮಾರುಕಟ್ಟೆಗೆ ಕೊಂಡೊಯ್ಯಬೇಕಿದ್ದವರು ಬೆಲೆ ಕುಸಿತದಿಂದ ಕೈ ಹಿಸುಕಿಕೊಳ್ಳುವಂತೆ ಆಗಿದೆ.

ಉತ್ತರದ ಪರಿಣಾಮ: ಕೊಬ್ಬರಿ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚುತ್ತದೆಯೇ? ಎಂದು ಬಹುತೇಕ ವರ್ತಕರನ್ನು ಪ್ರಶ್ನಿಸಿದರೆ, ಅವರು ಸ್ಪಷ್ಟವಾದ ಭರವಸೆ ನೀಡುತ್ತಿಲ್ಲ. ಬೆಲೆ ಏರುಪೇರಾಗುವಾಗ ರೈತರು ವರ್ತಕರ ಅಭಿಪ್ರಾಯ ಕೇಳುವುದು ಸಾಮಾನ್ಯ. ಆದರೆ ವರ್ತಕರು ಸಹ ಬೆಲೆ ಹೆಚ್ಚುತ್ತದೆ ಎನ್ನುವ ಬಗ್ಗೆ ಸ್ಪಷ್ಟವಾದ ಮಾತುಗಳನ್ನು ಆಡುತ್ತಿಲ್ಲ.

ಉತ್ತರ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿದ ಪ್ರವಾಹವೇ ಬೆಲೆ ಇಳಿಕೆಗೆ ಪ್ರಮುಖ ಕಾರಣ. ಆ ಪ್ರವಾಹದ ಪರಿಣಾಮಗಳು ಕೊಬ್ಬರಿಯ ಮೇಲೆ ಈಗ ಉಂಟಾಗುತ್ತಿದೆ. ಮತ್ತಷ್ಟು ಬೆಲೆ ಕುಸಿಯಬಹುದು ಎನ್ನುವುದು ವರ್ತಕರ ನುಡಿ.

ಹಳ್ಳಿಗಳಲ್ಲಿ ‘ವ್ಯಾಪಾರಿ ಪರವಾನಗಿ’ ಇಲ್ಲದೆ ಕೆಲವರು ಸಗಟಾಗಿ (ಚಿಪ್ಪಿನಿಂದ ಬೇರ್ಪಡದ ಕೊಬ್ಬರಿ) ಕೊಬ್ಬರಿ ಖರೀದಿಸುವರು. ಈ ಬೆಲೆ ಏರಿಳಿತದ ಕಾರಣದಿಂದ ಇಂತಹ ವ್ಯಾಪಾರಿಗಳು ಸಹ ಕಣ್ಮರೆ ಆಗಿದ್ದಾರೆ.

ಮುಂಬೈ ಪ್ರವಾಹದ ಪರಿಣಾಮ
ಮುಂಬೈಗೆ ತಿಪಟೂರು ಕೊಬ್ಬರಿ ಪೂರೈಕೆ ಆಗುತ್ತಿತ್ತು. ಆದರೆ ಅಲ್ಲಿ ಮಳೆ ಸುರಿದ ಪರಿಣಾಮ ಆ ಕೊಬ್ಬರಿ ಮಾರಾಟವಾಗಿಲ್ಲ. ಫಂಗಸ್ ಸಹ ಉಂಟಾಗುತ್ತಿದೆ. ಮೊದಲು ಆ ಕೊಬ್ಬರಿ ಖಾಲಿ ಆಗಬೇಕು. ನಂತರ ಅವರು ಖರೀದಿಗೆ ಬರುವರು ಎನ್ನುವ ಮಾಹಿತಿ ಇದೆ ಎಂದು ಹೇಳುವರು ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ.

ಮಾರುಕಟ್ಟೆಗೆ ಎಂದಿನಂತೆಯೇ ಕೊಬ್ಬರಿ ಬರುತ್ತಿದೆ. ಬೆಲೆ ದಿಢೀರ್ ಇಳಿದಿದ್ದರೆ ವರ್ತಕರಿಗೆ ಚೆನ್ನಾಗಿಯೇ ಪೆಟ್ಟು ಬೀಳುತ್ತಿತ್ತು. ಆದರೆ ಈಗ ಸಣ್ಣ ಮಟ್ಟದ ಇಳಿಕೆಯ ದುಷ್ಟರಿಣಾಮ ರೈತರ ಮೇಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.