ADVERTISEMENT

ಕರ್ತವ್ಯ ನಿರ್ವಹಣೆಯಲ್ಲಿ ಎಡವಿದರೆ ತಹಶೀಲ್ದಾರ್?

ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಮರಗಳನ್ನು ತೆರವುಗೊಳಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 15:27 IST
Last Updated 10 ಮಾರ್ಚ್ 2020, 15:27 IST
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿದರು
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿದರು   

ತುಮಕೂರು: ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ಧಮ್ಮ ಅವರ ಅನುಭವದಲ್ಲಿದ್ದ ಅಡಿಕೆ ಮತ್ತು ತೆಂಗಿನ ಮರಗಳನ್ನು ತೆರವುಗೊಳಿಸುವ ವಿಚಾರದಲ್ಲಿ ತಹಶೀಲ್ದಾರ್ ಎಂ.ಮಮತಾ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದರೆ ಎನ್ನುವ ಚರ್ಚೆ ಆರಂಭವಾಗಿದೆ.

ಗ್ರಾಮದ ಸರ್ವೆ ನಂಬರ್ 113 ಮತ್ತು 114ರಲ್ಲಿ ಇರುವ 5.22 ಎಕರೆ ಜಮೀನು ಉಡುಸಲಮ್ಮ ದೇವಸ್ಥಾನದ ಹೆಸರಿನಲ್ಲಿದೆ. ಇದು ಇನಾಂ ಜಮೀನು. ವಿವಾದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇದೆ. ಹೀಗಿದ್ದರೂ ತೆರವಿಗೆ ಆದೇಶಿಸಿದ್ದು ಏಕೆ? ದೇವಾಲಯದ ಆವರಣ ಸ್ವಚ್ಛಗೊಳಿಸುವಂತೆ ಮಾತ್ರ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಲಾಗಿತ್ತು ಎಂದು ತಹಶೀಲ್ದಾರ್ ಸಮರ್ಥನೆ ನೀಡುತ್ತಿದ್ದಾರೆ. ಆದರೆ ಅವರ ಆದೇಶ ಉಲ್ಲಂಘಿಸಿದ್ದರೆ ಲೆಕ್ಕಾಧಿಕಾರಿ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಿಲ್ಲ ಏಕೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಅಲ್ಲದೆ ಜಮೀನಿನ ವಿವಾದವಿರುವ ಕಾರಣ ತಹಶೀಲ್ದಾರ್ ತಮ್ಮ ಕೆಳಹಂತದ ಅಧಿಕಾರಿಗಳಿಗೆ ಜವಾಬ್ದಾರಿ ನೀಡುವ ಬದಲು ಖುದ್ದು ಸ್ಥಳದಲ್ಲಿ ಹಾಜರಿದಿದ್ದರೆ ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾಗುತ್ತಿರಲಿಲ್ಲ ಎಂಬುದು ಸ್ಥಳೀಯರ ವಿವರಣೆ.

ADVERTISEMENT

ಉದ್ದೇಶಪೂರ್ವಕ ಕೃತ್ಯ: ಕೆಲ ಮುಖಂಡರ ಪಿತೂರಿಯಿಂದ ಗ್ರಾಮ ಲೆಕ್ಕಾಧಿಕಾರಿ ಮರಗಳನ್ನು ತೆರವುಗೊಳಿಸಿರುವುದು ಅಕ್ಷಮ್ಯ ಎಂದು ಶಾಸಕ ಎಸ್‌.ಆರ್.ಶ್ರೀನಿವಾಸ್‌ ಹೇಳಿದರು.

ಮರಗಳನ್ನು ಕಡಿದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ಗ್ರಾಮದಲ್ಲಿ 20 ವರ್ಷಗಳಿಂದ ಜಾತ್ರೆ ಆಚರಿಸಿಕೊಂಡು ಬರುತ್ತಿದ್ದೆವು. ಮರವನ್ನು ಬೆಳೆಸಿದ್ದ ವಿಷಯ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರಿಗೆ ತಿಳಿದಿದೆ. ಮರಗಳನ್ನು ಕಡಿಯುವಾಗ ತಹಶೀಲ್ದಾರ್ ಗಮನಕ್ಕೆ ತರಬೇಕು ಎಂಬ ಪರಿಜ್ಞಾನ ಇರಲಿಲ್ಲವೆ? ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಕೆಲಸವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಆರ್ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ಕಳೆದುಕೊಂಡಿರುವ ಎರಡು ಕುಟುಂಬಗಳಿಗೆ ತಲಾ ₹ 25 ಸಾವಿರ ಪರಿಹಾರ ನೀಡಿದರು. ತಪ್ಪು ಮಾಡಿದ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

****

ಗ್ರಾಮ ಲೆಕ್ಕಾಧಿಕಾರಿ ಅಮಾನತು

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ ಮುರುಳಿ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ. ಜಾತ್ರೆ ಸಮಯದಲ್ಲಿ ಭಕ್ತರು ವಾಹನ ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಜಮೀನಿನಲ್ಲಿರುವ ಕೆಲವು ಸಣ್ಣ ಗಿಡಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಮೌಖಿಕ ಆದೇಶ ನೀಡಿದ್ದರು. ಆದರೆ ಗ್ರಾಮ ಲೆಕ್ಕಾಧಿಕಾರಿ ಅಧಿಕಾರ ದುರುಪಯೋಗ ಮಾಡಿಕೊಂಡು ಮರಗಳನ್ನು ಕಡಿದಿದ್ದಾರೆ ಎಂದು ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ.

***

ಡಿ.ಸಿ ಕಚೇರಿ ಎದುರು ಧರಣಿ

ಕಡಿದಿರುವ ಮರಗಳನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ಅನ್ಯಾಯಕ್ಕೆ ಒಳಗಾಗಿರುವ ಸಿದ್ಧಮ್ಮ ಅವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.