ತುರುವೇಕೆರೆ: ಕಾಯಿ ಸೀಮೆ ಎಂದೇ ಕರೆಸಿಕೊಳ್ಳುವ ತಾಲ್ಲೂಕಿನಲ್ಲಿ ತೆಂಗಿನ ಮರಗಳಿಗೆ ಕಾಂಡ ಸೋರುವುದು, ಬಿಳಿ ನೋಣ, ಕಪ್ಪು ಮಸಿ, ಅಣಬೆ ಮತ್ತು ನುಸಿ ರೋಗ, ಕೆಂಪು ಮೂತಿಹುಳ, ರೈನೋಸರಸ್ ದುಂಬಿ ಹಾವಳಿ ಸೇರಿದಂತೆ ಹಲವು ರೋಗಗಳಿಂದ ತೆಂಗು ಬೆಳೆ ಸೊರಗಿದೆ. ಇಳುವರಿ ಕುಂಠಿತಗೊಂಡಿದೆ.
ತಾಲ್ಲೂಕಿನಲ್ಲಿ ತೆಂಗನ್ನು ನೆಚ್ಚಿಕೊಂಡು ಶೇ 90ರಷ್ಟು ಜನರು ಜೀವನ ಸಾಗಿಸುತ್ತಿದ್ದಾರೆ. ತಾಲ್ಲೂಕಿನ ಭಾಗಶಃ ಜನರ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಚಟುವಟಿಕೆಗಳು ತೆಂಗು ಕೃಷಿಯೊಂದಿಗೆ ಅನುಸಂಧಾನಗೊಂಡಿದೆ.
ಹವಾಮಾನ ವೈಪರೀತ್ಯ ಮತ್ತು ತೆಂಗಿನ ಬೆಳೆಯಲ್ಲಿ ಸಮಗ್ರ ಕೀಟ, ರೋಗ ನಿಯಂತ್ರಣದ ಅರಿವು ರೈತರಲ್ಲಿ ಇಲ್ಲದ ಕಾರಣ ರೋಗವು ತಾಲ್ಲೂಕಿನಾದ್ಯಂತ ಆವರಿಸಿದೆ. ಎರಡು ವರ್ಷದಿಂದ ತೆಂಗು ಇಳುವರಿ ಗಣನೀಯವಾಗಿ ಕುಸಿದಿದ್ದು, ರೈತರ ಜೀವನದ ಮೇಲೆ ಬರೆ ಎಳೆದಂತಾಗಿದೆ.
ತಾಲ್ಲೂಕಿನ ಎಳನೀರು, ಉಂಡೆಕೊಬ್ಬರಿ, ಹೋಳು ಕೊಬ್ಬರಿ, ಚೂರು, ಚಿಪ್ಪು, ನಾರು ಹಾಗೂ ಮಟ್ಟೆಕಾಯಿಗೆ ಹೊರ ರಾಜ್ಯಗಳ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೆ ವ್ಯಾಪಕ ರೋಗದಿಂದ ತೆಂಗು ಉತ್ಪಾದನೆ ಕ್ಷೀಣಿಸಿದ್ದು, ರೈತರ ತೋಟಗಳಲ್ಲಿ ಕಾಯಿ ಇಲ್ಲ.
ಆರೋಗ್ಯವಂತ ಒಂದು ತೆಂಗಿನ ಮರದಲ್ಲಿ 80ರಿಂದ 250ರ ವರೆಗೆ ಕಾಯಿ ಕಟ್ಟುತ್ತವೆ. ಮಳೆಕೊರತೆ, ರೋಗದಿಂದ ಈಗ ಕೇವಲ ಹತ್ತು ಹದಿನೈದು ಕಾಯಿಗಳು ಮಾತ್ರ ಕಾಣಸಿಗುತ್ತವೆ. ಇದರಿಂದಾಗಿ ರೈತರಿಗೆ ತೆಂಗು ಬೆಳೆಯಲ್ಲಿ ಆದಾಯಕ್ಕಿಂತ ಖರ್ಚೇ ಹೆಚ್ಚು ಎನ್ನುವಂತಾಗಿದೆ.
2016-17ರಲ್ಲಿ ಬರಗಾಲದಿಂದ ತೆಂಗಿನ ಮರಗಳು ಒಣಗಿ ಹೋಗಿದ್ದವು. ಆ ಸಮಯದಲ್ಲಿ ಇಳುವರಿ ಕುಸಿದಿತ್ತು. ಆಗ ಬೆಲೆಯೂ ಕುಸಿದಿತ್ತು. ಸಾಕಷ್ಟು ರೈತರು ಅಡಿಕೆ ಬೆಳೆಯತ್ತ ವಾಲಿದರು. 2019ರಿಂದ 2023ರ ವರೆಗೆ ತಕ್ಕಮಟ್ಟಿಗೆ ಮಳೆ ಬರುತ್ತಿದೆ. ಆದರೆ ಕೊಬ್ಬರಿ ಬೆಲೆಯಲ್ಲಿ ಬದಲಾವಣೆ ಕಾಣಲಿಲ್ಲ. ಆಗ ನಾಫೆಡ್‌ನಲ್ಲಿ 11 ಸಾವಿರ ಬೆಂಬಲ ಬೆಲೆ ಇದ್ದ ಕಾರಣ ರೈತರು ನಾಫೆಡ್‌ನಲ್ಲಿ ಕೊಬ್ಬರಿ ಮಾರಾಟ ಶುರು ಮಾಡಿದರು. 2025-2026ರ ಜನವರಿ ಅಂತ್ಯದಿಂದ ಕೊಬ್ಬರಿ ಕ್ವಿಂಟಲ್‌ಗೆ ₹18ರಿಂದ ₹19 ಸಾವಿರದವರೆಗೆ ಉತ್ತಮ ಧಾರಣೆ ಇದೆ. ಆದರೆ ರೈತರ ಬಳಿ ತೆಂಗಿನ ಕಾಯಿ, ಕೊಬ್ಬರಿಯೇ ಇಲ್ಲ ಎನ್ನುತ್ತಾರೆ ತೆಂಗು ಬೆಳೆಗಾರರ ಸಂಘದ ಎನ್.ಆರ್.ಜಯರಾಮ್.
ತಾಲ್ಲೂಕಿನ ನಾಲ್ಕು ಹೋಬಳಿಗಳ ವ್ಯಾಪ್ತಿಯಲ್ಲಿ 37,525.73 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಇಲ್ಲಿ 46,15,664 ತೆಂಗಿನ ಮರಗಳಿವೆ. ಇವುಗಳಿಂದ ವರ್ಷಕ್ಕೆ 2,551 ಲಕ್ಷದ ತೆಂಗಿನ ಕಾಯಿ ಉತ್ಪಾದನೆಯಾಗಲಿದೆ. ಕಳೆದೆರಡು ವರ್ಷದಿಂದ ತಾಲ್ಲೂಕಿನ ಒಟ್ಟಾರೆ ಇಳುವರಿ ಇಳಿಮುಖವಾಗಿದೆ.
ಬಿಸಿಲಿನ ಝಳಕ್ಕೆ ತೆಂಗಿನ ಹರಳು ನಿಲ್ಲುತ್ತಿಲ್ಲ. ಎಳನೀರಿನ ಹಂತಕ್ಕೆ ಬಂದ ಕಾಯಿಗಳು ಭೂಮಿಯಲ್ಲಿ ಪೊಟ್ಯಾಶಿಯಂ, ಬೋರಾನ್ ಅಂಶ ಕಡಿಮೆ ಇರುವ ಕಾರಣ ಬುರುಡೇ ಉದುರುತ್ತಿವೆ. ಕೋತಿಗಳು ತೋಟಕ್ಕೆ ಬಿದ್ದು ಎಳ ನೀರನ್ನು ಕುಡಿಯುತ್ತಿವೆ. ಇವೆಲ್ಲ ಸಮಸ್ಯೆಗಳ ನಡುವೆ ರೈತರು ತೆಂಗಿನ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ.
ಹವಮಾನ ವೈಪರೀತ್ಯ ಮಳೆಕೊರತೆಯಿಂದ ತಾಲ್ಲೂಕಿನಲ್ಲಿ ಕಾಂಡ ಸೋರುವುದು ಬಿಣನೊಣ ಅಣಬೆ ರೋಗ ಕೆಂಪು ಮೂತಿ ಗರಿ ಉದುರುವುದು ಸುಳಿ ಬೀಳುವ ರೋಗಗಳಿವೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರಿಗೆ ರೋಗ ನಿಯಂತ್ರಣಕ್ಕೆ ಅರಿವು ಮೂಡಿಸಬೇಕುಮಾಚೇನಹಳ್ಳಿ ಮಲ್ಲಿಕಾರ್ಜುನ್ ತೆಂಗು ಬೆಳೆಗಾರರ ಸಂಘದ ನಿರ್ದೇಶಕ
ತೆಂಗಿನ ಕಾಯಿ ಕೊಬ್ಬರಿಗೆ ಚಿನ್ನದ ಬೆಲೆ ಇದೆ. ಆದರೆ ಕಾಂಡ ಸೋರುವುದು ಬಿಳಿನೊಣ ಬಾಧೆ ಇದೆ. ಎಷ್ಟೇ ಗೊಬ್ಬರ ನೀರು ಔಷಧಿ ಹಾಕಿದರೂ ಮರಗಳಲ್ಲಿ ಹೊಂಬಾಳೆ ಮತ್ತು ಹರಳು ಸರಿಯಾಗಿ ಕಟ್ಟುತ್ತಿಲ್ಲ. ತೆಂಗು ಬೆಳೆಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕುಶಾಂತಯ್ಯ ಅಕ್ಕಳಸಂದ್ರ ಗೊಲ್ಲರಹಟ್ಟಿ
ವಿಜ್ಞಾನಿಗಳಿಂದ ನಿಯಂತ್ರಣ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ರೈತರು ತೋಟಗಾರಿಕೆಯಿಂದ ಸಿಗುವ ಔಷಧಿ ಮಾಹಿತಿ ಪಡೆದು ರೋಗ ನಿಯಂತ್ರಿಸಬೇಕು. ರೋಗ ಲಕ್ಷಣ ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿಸುರೇಶ್ ಎಸ್. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.