ADVERTISEMENT

ತುಮಕೂರು: ಇಳಿಕೆಯತ್ತ ಸಾಗಿದ ಕೊಬ್ಬರಿ ಬೆಲೆ; ಒಂದು ತಿಂಗಳಲ್ಲಿ ₹5 ಸಾವಿರ ಇಳಿಕೆ

ಕುಸಿಯುತ್ತಲೇ ಸಾಗಿದೆ ಕೊಬ್ಬರಿ ಬೆಲೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:28 IST
Last Updated 8 ಆಗಸ್ಟ್ 2025, 5:28 IST
ಉಂಡೆ ಕೊಬ್ಬರಿ
ಉಂಡೆ ಕೊಬ್ಬರಿ   

ತುಮಕೂರು: ಹಾವು– ಏಣಿ ಆಟ ಮುಂದುವರಿಸಿದ್ದ ಉಂಡೆ ಕೊಬ್ಬರಿ ಧಾರಣೆ ಇತ್ತೀಚಿನ ಕೆಲವು ವಾರಗಳಿಂದ ಇಳಿಕೆಯತ್ತ ಸಾಗಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಮತ್ತಷ್ಟು ಕುಸಿದರೆ? ಎಂಬ ಚಿಂತೆ ಆವರಿಸಿದೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಗರಿಷ್ಠ ದರ ಕ್ವಿಂಟಲ್ ₹26,500ಕ್ಕೆ ಇಳಿಕೆಯಾಗಿದೆ. ಕನಿಷ್ಠ ₹24,000, ಮಾದರಿ ₹25,500ಕ್ಕೆ ಮಾರಾಟವಾಗಿದೆ. ಮಾರುಕಟ್ಟೆಗೆ 1,816 ಕ್ವಿಂಟಲ್ (4,224 ಚೀಲ) ಆವಕವಾಗಿತ್ತು.

ಒಂದು ವಾರದ ಅಂತರದಲ್ಲಿ ಕ್ವಿಂಟಲ್‌ಗೆ 1,606, ಸೋಮವಾರದ ಹರಾಜಿನಿಂದ ಗುರುವಾರ ಹರಾಜಿನ ಹೊತ್ತಿಗೆ ₹1 ಸಾವಿರ ಕಡಿಮೆಯಾಗಿದೆ. ಒಂದು ತಿಂಗಳ ಅಂತರದಲ್ಲಿ ಕ್ವಿಂಟಲ್‌ಗೆ ₹5 ಸಾವಿರ ಕುಸಿತ ಕಂಡಂತಾಗಿದೆ.

ADVERTISEMENT

ಕ್ವಿಂಟಲ್ ಬೆಲೆ ₹31,606ಕ್ಕೆ ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ಜೂನ್ ತಿಂಗಳ ಕೊನೆಯವರೆಗೂ ಸತತವಾಗಿ ಬೆಲೆ ಏರಿಕೆಯತ್ತಲೇ ಸಾಗಿತ್ತು. ನಂತರದ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಜುಲೈ ತಿಂಗಳ ಮಧ್ಯದ ವೇಳೆಗೆ ₹28 ಸಾವಿರದಿಂದ ₹30 ಸಾವಿರದ ನಡುವೆ ಮಾರಾಟವಾಗುತಿತ್ತು. ಸ್ವಲ್ಪಮಟ್ಟಿನ ತೋಯ್ದಾಟದ ನಡುವೆ ₹28 ಸಾವಿರದ ಆಸುಪಾಸಿನಲ್ಲಿ ಸ್ಥಿರವಾಗಬಹುದು ಎಂದು ವರ್ತಕರು, ಖರೀದಿದಾರರು, ದಲ್ಲಾಳಿಗಳು, ರೈತರು ಭಾವಿಸಿದ್ದರು.

ಆದರೆ, ಮಾರುಕಟ್ಟೆಯ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವಂತೆ ಜುಲೈ ಮಧ್ಯ ಭಾಗದಿಂದ ಬೆಲೆ ಕುಸಿಯುತ್ತಲೇ ಇದೆ. ಆಗಸ್ಟ್ ತಿಂಗಳಲ್ಲೂ ಚೇತರಿಸುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಕ್ವಿಂಟಲ್ ₹25 ಸಾವಿರ ಸಮೀಪದಲ್ಲಿ ಸ್ಥಿರವಾಗಬಹುದು. ಇದಕ್ಕಿಂತ ಇಳಿಕೆಯಾಗುವ ಸಾಧ್ಯತೆಗಳು ಕಡಿಮೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದಂತೆ ದರ ಏರಿಕೆಯತ್ತ ಮುಖ ಮಾಡಿತ್ತು. ಕಳೆದ ಮಾರ್ಚ್‌ನಿಂದ ಜೂನ್ ಅಂತ್ಯದ ವರೆಗೆ ನಾಗಾಲೋಟದಲ್ಲಿ ಸಾಗಿತ್ತು. ಆದರೆ ಈಗ ಹಿನ್ನಡೆ ಕಂಡಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

‘ಒಂದು ಹಂತದವರೆಗೆ ಬೆಲೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಅತ್ಯಲ್ಪ ಏರಿಳಿತ ಹೊರತುಪಡಿಸಿದರೆ ಮತ್ತಷ್ಟು ಕುಸಿಯುವ ಸಾಧ್ಯತೆಗಳು ಕಡಿಮೆ’ ಎಂದು ವರ್ತಕರು ಹೇಳುತ್ತಾರೆ.

ಕುಸಿದ ಬೇಡಿಕೆ; ಎಣ್ಣೆಗೂ ಬಳಸುತ್ತಿಲ್ಲ

ಉಂಡೆ ಕೊಬ್ಬರಿ ಬೆಲೆ ಏರಿಕೆಯಿಂದಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿದೆ. ಆ ಭಾಗದ ವರ್ತಕರು ಖರೀದಿಸುವುದು ಕಡಿಮೆ ಮಾಡಿದ್ದು ಧಾರಣೆ ಕುಸಿಯುವಂತೆ ಮಾಡಿದೆ. ತಮಿಳುನಾಡು ಕೇರಳ ಭಾಗದಲ್ಲಿ ತೆಂಗಿನ ಕಾಯಿ ಸೀಸನ್ ಆರಂಭವಾಗಿದ್ದು ಮಾರುಕಟ್ಟೆಗೆ ಬರುತ್ತಿದೆ. ಕೊಬ್ಬರಿ ದುಬಾರಿಯಾದ ಕಾರಣಕ್ಕೆ ತಮಿಳುನಾಡು ಕೇರಳದಲ್ಲಿ ಕಡಿಮೆ ಬೆಲೆಗೆ ಸಿಗುವ ತೆಂಗಿನ ಕಾಯಿಗಳನ್ನೇ ಖರೀದಿಸಿ ಅದರ ಮೂಲಕವೇ ತೆಂಗಿನ ಎಣ್ಣೆ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದಾಗಿ ಎಣ್ಣೆ ಉತ್ಪಾದನೆಗೆ ನಮ್ಮ ರಾಜ್ಯದ ಕೊಬ್ಬರಿ ಬಳಕೆ ಕಡಿಮೆಯಾಗಿದೆ. ಹಾಗಾಗಿ ಬೆಲೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಕಂಪನಿಗಳ ಹಿಡಿತ

ತಿಪಟೂರು ಕೊಬ್ಬರಿಯು ಎಣ್ಣೆ ಮಾರುಕಟ್ಟೆಯನ್ನು ಅವಲಂಬಿಸಿದೆ. ನಮ್ಮ ರೈತರು ಸರಿಯಾದ ರೀತಿಯಲ್ಲಿ ಕೊಬ್ಬರಿ ಸಂಸ್ಕರಣೆ ಮಾಡುತ್ತಿಲ್ಲ. ಪ್ರಕೃತಿ ವಿಕೋಪದಿಂದ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಕೊಬ್ಬರಿ ಹಾಗೂ ಕೌಟು ದಾಸ್ತಾನು ದೊಡ್ಡ ಕಂಪನಿಗಳ ಹಿಡಿತದಲ್ಲಿದ್ದು ಬೆಲೆ ಏರಿಕೆ– ಇಳಿಕೆಗೆ ಕಾರಣವಾಗುತ್ತಿದೆ. ಯೋಗೀಶ್ ಕೊಬ್ಬರಿ ವರ್ತಕ ತಿಪಟೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.