
ತುಮಕೂರು: ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಮಂಗಳವಾರ ಆರೋಪಿಸಿದರು.
ಒಂದೆರಡು ಇಲಾಖೆಗಳನ್ನು ಹೊರತುಪಡಿಸಿದರೆ ಬಹುತೇಕ ಇಲಾಖೆಗಳಲ್ಲಿ ಜ್ಯೇಷ್ಠತೆ ಆಧಾರದ ಮೇಲೆ ಬಿಲ್ ಹಣ ಬಿಡುಗಡೆ ಮಾಡುತ್ತಿಲ್ಲ. ಈಗಿನ ಸರ್ಕಾರದಲ್ಲೂ ಕಮಿಷನ್ ತೆಗೆದುಕೊಳ್ಳುವ ಪ್ರಮಾಣ ಅಧಿಕವಾಗಿದೆ. ಸಂಘದ ಹಿಂದಿನ ಅಧ್ಯಕ್ಷರು ಕಮಿಷನ್ ಬಗ್ಗೆ ಹೇಳಿದ್ದರಿಂದ ಗುತ್ತಿಗೆದಾರರು ಸಮಸ್ಯೆ ಎದುರಿಸಬೇಕಾಯಿತು. ಸತ್ಯ ಹೇಳಿದ್ದರಿಂದ ಸರ್ಕಾರ ಕಿರುಕುಳ ನೀಡುವುದು ಹೆಚ್ಚಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ
ವ್ಯಕ್ತಪಡಿಸಿದರು.
ಬಾಕಿ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನ ಸ್ವಾಂತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸ್ಪಂದಿಸಿ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಏಪ್ರಿಲ್‌ನಿಂದ ರಾಜ್ಯದಾದ್ಯಂತ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಬೇಕಾಗುತ್ತದೆ ಎಂದು
ಎಚ್ಚರಿಸಿದರು.
ಜಿಲ್ಲೆಯಲ್ಲಿ ₹1850 ಕೋಟಿ ಬಾಕಿ
ತುಮಕೂರು ಜಿಲ್ಲೆಯಲ್ಲೇ ಗುತ್ತಿಗೆದಾರರಿಗೆ ₹1850 ಕೋಟಿ ಬಾಕಿ ನೀಡಬೇಕಿದೆ ಎಂದು ಆರ್.ಮಂಜುನಾಥ್ ತಿಳಿಸಿದರು. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ₹8370 ಕೋಟಿ ಜಲಸಂಪನ್ಮೂಲ ₹13 ಸಾವಿರ ಕೋಟಿ ಗ್ರಾಮೀಣಾಭಿವೃದ್ಧಿ ₹3800 ಕೋಟಿ ಸಣ್ಣ ನೀರಾವರಿ ₹3 ಸಾವಿರ ಕೋಟಿ ನಗರಾಭಿವೃದ್ಧಿ ₹2 ಸಾವಿರ ಕೋಟಿ ವಸತಿ ₹2600 ಕಾರ್ಮಿಕ ಇಲಾಖೆ ₹2 ಸಾವಿರ ಕೋಟಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1600 ಕೋಟಿ ಬಿಲ್ ಬಾಕಿ ಉಳಿಸಿ ಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.