ADVERTISEMENT

ತುಮಕೂರು | ಅವೈಜ್ಞಾನಿಕ ಕಾಮಗಾರಿ: ಸ್ಮಾರ್ಟ್‌ ಸಿಟಿ ಅಧಿಕಾರಿ ವಿರುದ್ಧ ಪ್ರಕರಣ

ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ, ಬಣ್ಣ ಕಾಣದ ಹಂಪ್ಸ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 4:29 IST
Last Updated 25 ಜುಲೈ 2024, 4:29 IST
ತುಮಕೂರಿನಲ್ಲಿ ಬಣ್ಣ ಕಾಣದ ಹಂಪ್ಸ್‌ (ಸಾಂದರ್ಭಿಕ ಚಿತ್ರ)
ತುಮಕೂರಿನಲ್ಲಿ ಬಣ್ಣ ಕಾಣದ ಹಂಪ್ಸ್‌ (ಸಾಂದರ್ಭಿಕ ಚಿತ್ರ)   

ತುಮಕೂರು: ಅವೈಜ್ಞಾನಿಕ ಕಾಮಗಾರಿ ನಡೆಸಿ ಅಪಘಾತಕ್ಕೆ ಕಾರಣವಾದ ಆರೋಪದ ಮೇಲೆ ಸ್ಮಾರ್ಟ್‌ ಸಿಟಿ ಅಧಿಕಾರಿ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಸ್ತೆಯ ಉಬ್ಬುಗಳಿಗೆ ಬಣ್ಣ ಬಳಿಯದ ಕಾರಣಕ್ಕೆ ಅಪಘಾತ ಸಂಭವಿಸಿ, ನನ್ನ ಗಂಡ ಆಸ್ಪತ್ರೆ ಪಾಲಾಗಿದ್ದಾರೆ. ಕಾಮಗಾರಿ ನಡೆಸಿದ ಸ್ಮಾರ್ಟ್‌ ಸಿಟಿ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ಅಮರಜ್ಯೋತಿ ನಗರದ ಎಂ.ಅಭಿಲಾಷ ಎಂಬುವರು ಜುಲೈ 23ರಂದು ದೂರು ನೀಡಿದ್ದರು.

‘ನನ್ನ ಗಂಡ ಎಸ್‌.ಸತೀಶ್‌ ಜುಲೈ 21ರಂದು ರಾತ್ರಿ 11.40 ಗಂಟೆ ಸುಮಾರಿಗೆ ಜಯನಗರದಿಂದ ಮನೆಗೆ ಬರುವಾಗ ಕಾರ್ತಿಕ್‌ ಬಾರ್‌ ಸಮೀಪ ರಿಂಗ್‌ ರಸ್ತೆಯ ಸರ್ವೀಸ್‌ ರಸ್ತೆಗೆ ಹಾಕಿರುವ ಹಂಪ್ಸ್‌ ಕಾಣದೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ತಲೆ, ಕೈ–ಕಾಲುಗಳಿಗೆ ಗಾಯವಾಗಿ ರಕ್ತಸ್ರಾವವಾಗಿದೆ. ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜುಲೈ 22ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಶ್ರೀದೇವಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳೇ ಕಾರಣ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ರಸ್ತೆಯ ಉಬ್ಬುಗಳಿಗೆ ಬಿಳಿ ಬಣ್ಣ ಬಳಿದಿಲ್ಲ. ರೇಡಿಯಂ ದೀಪ ಅಳವಡಿಸಿಲ್ಲ. ಕನಿಷ್ಠ ಸೂಚನಾ ಫಲಕ ಹಾಕಿಲ್ಲ. ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಅವೈಜ್ಞಾನಿಕ ಕೆಲಸದಿಂದ ಅಪಘಾತವಾಗಿದೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.