ADVERTISEMENT

ರಾಜಕಾಲುವೆ ಕಾಮಗಾರಿ ಪೂರ್ಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 6:02 IST
Last Updated 11 ಜೂನ್ 2024, 6:02 IST
<div class="paragraphs"><p>ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಗಾರ್ಡನ್‌ ರಸ್ತೆಯ ಸ್ಮಶಾನ ಮುಂಭಾಗ ಶ್ರೀರಂಗಪಟ್ಟಣ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ </p></div>

ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಗಾರ್ಡನ್‌ ರಸ್ತೆಯ ಸ್ಮಶಾನ ಮುಂಭಾಗ ಶ್ರೀರಂಗಪಟ್ಟಣ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ

   

ತುಮಕೂರು: ನಗರದ ಗಾರ್ಡನ್‌ ರಸ್ತೆಯ ಸ್ಮಶಾನ ಮುಂಭಾಗದ ಶ್ರೀರಂಗಪಟ್ಟಣ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಈ ಭಾಗದ ರೈತ- ನಾಗರಿಕ ಹೋರಾಟ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

‘ಈಗಾಗಲೇ ಮಳೆಗಾಲ ಶುರುವಾಗಿದ್ದು, ರಾಜಕಾಲುವೆ ಕಾಮಗಾರಿ ಇನ್ನೂ ಮುಗಿದಿಲ್ಲ. ಮಳೆ ಬಂದಾಗ ಕಲುಷಿತ ನೀರು ಶ್ರೀರಂಗಪಟ್ಟಣ, ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಶವ ಸಂಸ್ಕಾರಕ್ಕೂ ಪರದಾಡಬೇಕಾಗಿದೆ’ ಎಂದು ಸಮಿತಿಯ ಮುಖಂಡರು ಅಳಲು ತೋಡಿಕೊಂಡರು.

ADVERTISEMENT

ಅಮಾನಿಕೆರೆಯಿಂದ ಪ್ರಾರಂಭವಾಗುವ ರಾಜಕಾಲುವೆ ಕಾಮಗಾರಿ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತಿದೆ. ಇದು ಭೀಮಸಂದ್ರದ ಕೆರೆಗೆ ಅಳವಡಿಸಿರುವ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸುತ್ತದೆ. ಭೀಮಸಂದ್ರ ಕೆರೆಗೆ ನೀರು ಹರಿಯುವ ರಾಜಕಾಲುವೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ, ಜಿಲ್ಲಾ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಭರವಸೆ ನೀಡಿ ಸುಮ್ಮನಾಗುತ್ತಾರೆ. ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿರುವ ಪ್ರದೇಶದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಬಂದಾಗ ಪ್ಲಾಸ್ಟಿಕ್, ತ್ಯಾಜ್ಯ ಮಿಶ್ರಿತ ಕಲುಷಿತ ನೀರು ಜಮೀನುಗಳಿಗೆ ಹರಿಯುತ್ತಿದೆ. ಜನರು ವಾಸ ಮಾಡುವುದೇ ಕಷ್ಟವಾಗಿದೆ. ಸಾರ್ವಜನಿಕ ಸ್ಮಶಾನ ಸಹ ಕೊಳಚೆ ನೀರಿನಿಂದ ತುಂಬಿಕೊಂಡು ಶವಸಂಸ್ಕಾರದ ವೇಳೆ ತೊಂದರೆಯಾಗುತ್ತಿದೆ ಎಂದರು.

ಹೋರಾಟ ಸಮಿತಿ ಸಂಚಾಲಕ ಟಿ.ಎಚ್.ರಾಮು, ಯಜಮಾನ್‌ ಶಿವಕುಮಾರ್, ಟಿ.ಜಿ.ವಸಂತ್‍ಕುಮಾರ್, ಎಸ್.ರಾಘವೇಂದ್ರ, ಎಚ್.ಎಸ್.ಶಿವಕುಮಾರ್, ಹೊನ್ನಗಂಗಯ್ಯ, ಶಿವಣ್ಣ, ಗೋವಿಂದರಾಜು, ರಂಗಣ್ಣ, ಶಿವಗಂಗಯ್ಯ, ಗಂಗಣ್ಣ, ಮುರಳಿ ಇತರರು ಹಾಜರಿದ್ದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.