
ಕುಣಿಗಲ್: ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾನಿಗಳ ನೆರವಿನಿಂದ ಪ್ರಥಮ ಬಾರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾರಂಭವಾಗಿದೆ.
ಖಾಸಗಿ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರವೇಶಕ್ಕೆ ದುಬಾರಿ ಶುಲ್ಕವಿದ್ದು ಭರಿಸಲಾಗದ ಪೋಷಕರು ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾರಂಭಿಸಲು ನಿರಂತರವಾಗಿ ಮನವಿ ಮಾಡಿದ್ದರು. ಈ ಬಗ್ಗೆ ಪ್ರಾಂಶುಪಾಲ ನಾಗರಾಜು ಅವರು ಇಲಾಖೆ ಮತ್ತು ಶಾಸಕರ ಗಮನಕ್ಕೆ ತಂದಿದ್ದರು.
ಇಲಾಖೆ ಪ್ರಸಕ್ತ ಸಾಲಿನಿಂದಲೇ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾರಂಭಿಸಲು ಅನುಮತಿ ನೀಡಿದ್ದರೂ, ಕಂಪ್ಯೂಟರ್ ಇಲ್ಲದ ಕಾರಣ ಗೊಂದಲವಾಗಿತ್ತು. ಕಳೆದ ವರ್ಷ ಕಾಲೇಜಿನ ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಿಷನ್ ನೀಡಿದ್ದ ಪೆಟ್ರೊ ನೆಟ್ ಎಂ.ಎಚ್.ಬಿ. ಲಿಮಿಟೆಡ್‌ನ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿಯಲ್ಲಿ 20 ಕಂಪ್ಯೂಟರ್‌ಗಳನ್ನು ದಾನವಾಗಿ ನೀಡಿ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾರಂಬಿಸಲು ಸಹಕಾರ ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಹೆಚ್ಚಾಗಿರುವ ಮಹಾತ್ಮ ಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪ್ರಸಕ್ತ ಸಾಲಿನಿಂದೇ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾರಂಭವಾಗಿದ್ದು, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಿಂದ 32 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಉಪನ್ಯಾಸಕರ ಕೊರತೆ ಇದ್ದು, ಕಾಲೇಜು ಅಭಿವೃದ್ಧಿ ಸಮಿತಿಯಿಂದ ಸದ್ಯಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಮುಂದಿನ ಸಾಲಿಗೆ ಖಾಯಂ ಉಪನ್ಯಾಸಕರ ನೇಮಕಾತಿ ಭರವಸೆ ಇದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
‘ಖಾಸಗಿ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಪ್ರವೇಶ ಶುಲ್ಕ ಹೆಚ್ಚಾಗಿದ್ದು, ಸರ್ಕಾರಿ ಕಾಲೇಜಿನಲ್ಲಿ ಕಡಿಮೆ ಶುಲ್ಕದೊಂದಿಗೆ ಪ್ರಾರಂಭವಾಗಿರುವುದು ಕಲಿಕೆಗೆ ಸಹಕಾರಿಯಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿ ರಕ್ಷಿತಾ.
‘ಮಹಾತ್ಮ ಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಥಮ ಬ್ಯಾಚ್ ವಿದ್ಯಾರ್ಥಿ ಎಂಬ ಹೆಮ್ಮೆ ಇದೆ’ ಎನ್ನುತ್ತಾರೆ ಮದಿಹಾ ಖಾನಂ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಮುಂದಿನ ವ್ಯಾಸಂಗಕ್ಕೆ ಕಂಪ್ಯೂಟರ್ ಸೈನ್ಸ್ ಕಲಿಕೆ ಸಹಕಾರಿ ಎನ್ನುತ್ತಾರೆ ಸಾನಿಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.