ADVERTISEMENT

ಚಳವಳಿ ಪ್ರಖರಗೊಳಿಸಿದ ಮಾನ್ಪಡೆ: ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 3:48 IST
Last Updated 21 ಅಕ್ಟೋಬರ್ 2020, 3:48 IST

ತುಮಕೂರು: ರೈತ ಚಳವಳಿ ಮೂಲಕ ರಾಜ್ಯದಲ್ಲಿ ರೈತರನ್ನು ಮಾರುತಿ ಮಾನ್ಪಡೆ ಸಂಘಟಿಸಿದರು. ಚಳವಳಿ ಪ್ರಖರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಸ್ಮರಿಸಿದರು.

ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಗರದ ಜನಚಳವಳಿ ಕೇಂದ್ರದಲ್ಲಿ ಮಂಗಳವಾರ ರೈತ ಮುಖಂಡ, ಸಿಪಿಎಂ ನಾಯಕರೂ ಆದ ಮಾರುತಿ ಮಾನ್ಪಡೆ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘರ್ಷಾತ್ಮಕ ಹೋರಾಟದ ಮೂಲಕ ಬಡವರು, ಶೋಷಿತರಿಗೆ ನ್ಯಾಯ ಕೊಡಿಸಿದ್ದರು. ಹಾಗಾಗಿ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಡೆಯಬೇಕು. ಅವರ ತತ್ವ ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ADVERTISEMENT

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಮಾರುತಿ ಮಾನ್ಪಡೆ ಅವರು ಸರ್ಕಾರಿ ಹುದ್ದೆ ತೊರೆದು ಜನಪರ ಚಳವಳಿಗೆ ಬಂದು ರೈತ ಸಂಘಟನೆ, ಪಂಚಾಯತ್ ನೌಕರರು, ಡಿಎಚ್‍ಎಸ್ ಸಂಘಟನೆಗಳನ್ನು ಸಕ್ರಿಯಗೊಳಿಸುವ ಮೂಲಕ ಹಲವಾರು ಹೋರಾಟಗಳನ್ನು ರೂಪಿಸಿ ನ್ಯಾಯಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ನಡೆದ ಹೋರಾಟವನ್ನು ಮುನ್ನಡೆಸಿದ್ದರು. ಸೌಹಾರ್ದ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕೋಮುಸೌಹಾರ್ದತೆ ಬಯಸಿದ್ದರು’ ಎಂದು ನೆನಪಿಸಿಕೊಂಡರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ರೈತ, ಕಾರ್ಮಿಕ ಚಳವಳಿಗಳ ನಾಯಕ ಮಾರುತಿ ಮಾನ್ಪಡೆ ಅವರು ಹೋರಾಟಗಳನ್ನು ಉಸಿರಾಗಿಸಿಕೊಂಡಿದ್ದರು. ಪ್ರಶ್ನಿಸುವುದು, ಪ್ರತಿಭಟಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ ಎಂದು ನಂಬಿದ್ದರು’ ಎಂದು ಹೇಳಿದರು.

ಗ್ರಾಮ ಪಂಚಾಯತ್ ನೌಕರರ ಸಂಘಟನೆ ಕಾರ್ಯದರ್ಶಿ ಎಚ್.ಡಿ.ನಾಗೇಶ್, ‘ಪಂಚಾಯ್ತಿ ನೌಕರರಿಗೆ ಕನಿಷ್ಠ ವೇತನ, ಬಡ್ತಿ ಕೊಡಿಸಲು ಹೋರಾಟ ನಡೆಸಿದ್ದರು’ ಎಂದರು.

ಡಿವೈಎಫ್‍ಐ ಮುಖಂಡ ದರ್ಶನ್, ‘ಯುವಜನ ಸಂಘಟನೆ ಕಟ್ಟಲು ಮಾನ್ಪಡೆಯವರು ಉತ್ಸಾಹ, ಸ್ಪೂರ್ತಿಯನ್ನು ತುಂಬಿ ಸಹಕಾರ ನೀಡಿದ್ದರು’ ಎಂದು ತಿಳಿಸಿದರು.

ಕಾರ್ಮಿಕ ಮುಖಂಡರಾದ ಸುಜಿತ್ ನಾಯಕ್, ಪಂಚಾಕ್ಷರಿ, ಚಂದ್ರಪ್ಪ ಮಾತನಾಡಿದರು. ರೈತ ಮುಖಂಡರಾದ ದೊಡ್ಡನಂಜಪ್ಪ, ನರಸಿಂಹಮೂರ್ತಿ, ಕಾರ್ಮಿಕರಾದ ಮಂಜು, ನಾಗರಾಜು, ಅಂಜನಮೂರ್ತಿ, ಲಕ್ಷ್ಮಿಕಾಂತ್ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.