ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ‘ಭಾರತೀಯ ಜ್ಞಾನ ಪರಂಪರೆ’ ಕುರಿತ ಸಮ್ಮೇಳನ ಏರ್ಪಡಿಸಲಾಗಿತ್ತು.
ತುಮಕೂರು: ಭಾರತೀಯರ ಮೇಲಿರುವ ಆರ್ಯ-ದ್ರಾವಿಡ ಆಕ್ರಮಣ, ವಲಸೆ ಸಿದ್ಧಾಂತಗಳು ಬ್ರಿಟಿಷ್ ಕಾಲದಲ್ಲಿ ಬರೆದ ಕಟ್ಟು ಕತೆಯಾಗಿದೆ ಎಂದು ಅಮೆರಿಕ ಹಿಂದೂ ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕ ರಾಜ್ ವೇದಂ ಅಭಿಪ್ರಾಯಪಟ್ಟರು.
ವಿ.ವಿಯಲ್ಲಿ ಶುಕ್ರವಾರ ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಭಾರತೀಯ ಜ್ಞಾನ ಪರಂಪರೆ’ ಕುರಿತ ಸಮ್ಮೇಳನದಲ್ಲಿ ಮಾತನಾಡಿದರು.
ಭಾರತೀಯರು ಬ್ಯಾಬಿಲೋನ್, ಗ್ರೀಸ್ ನಾಗರಿಕತೆಯಿಂದ ಜ್ಞಾನ ವ್ಯವಸ್ಥೆ ಅಳವಡಿಸಿಕೊಂಡರು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬದಲಿಗೆ, ಮಾನವೀಯ, ಪ್ರಬುದ್ಧ ತತ್ವಗಳನ್ನು ಒಳಗೊಂಡ ಸ್ವತಂತ್ರ ಜ್ಞಾನ ವ್ಯವಸ್ಥೆಯಿಂದ ಭಾರತ ಅಭಿವೃದ್ಧಿಯಾಯಿತು ಎಂದು ಪುರಾತತ್ವ ಶಾಸ್ತ್ರ ಹೇಳುತ್ತದೆ. 13 ಸಾವಿರ ವರ್ಷಗಳ ಇತಿಹಾಸ ಉಳ್ಳ ಭಾರತೀಯ ಪ್ರಾಚೀನ ನಾಗರಿಕತೆಯು ಇತರ ನಾಗರಿಕತೆಗಳ ಮೇಲೆ ಪ್ರಭಾವ ಬೀರಿದ ಜ್ಞಾನ ವ್ಯವಸ್ಥೆ ಒಳಗೊಂಡಿದೆ ಎಂದರು.
ಅಸಂಸ್ಕೃತ, ಆಕ್ರಮಣಕಾರಿ, ಅಮಾನವೀಯ ತತ್ವ ಚಿಂತನೆಗಳನ್ನು ಭಾರತೀಯರು ಅನುಸರಿಸುತ್ತಿದ್ದರು ಎಂಬುದು ಬ್ರಿಟಿಷ್ ನಿರ್ಮಿತ ನಕಲಿ ಇತಿಹಾಸ. ಇತ್ತೀಚಿನ ನಾಗರಿಕತೆಯ ಒಳಹರಿವಿನೊಂದಿಗೆ ಭಾರತ ಅಭಿವೃದ್ಧಿಗೊಂಡಿತು ಎಂಬುದು ಕಪೋಕಲ್ಪಿತ ಕತೆಯಾಗಿದೆ. ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತನ್ನದೇ ನಾಗರಿಕ ವ್ಯವಸ್ಥೆಯಲ್ಲಿ, ಪರಂಪರೆಯಲ್ಲಿ ಅಭಿವೃದ್ಧಿಯಾಯಿತು ಎಂದು ತಿಳಿಸಿದರು.
ಬೆಂಗಳೂರಿನ ದಿ ಮಿಥಿಕ್ ಸೊಸೈಟಿ ಕಾರ್ಯದರ್ಶಿ ಎಸ್.ರವಿ, ‘ಬ್ರಿಟಿಷ್ ಆಡಳಿತಾವಧಿಯಲ್ಲಿ ತಿರುಚಿ ಬರೆದ ಇತಿಹಾಸವನ್ನು ಸಮಾಜಕ್ಕೆ ತಿಳಿಸಿ, ವೈಜ್ಞಾನಿಕ ಪುರಾವೆಗಳೊಂದಿಗೆ ಭಾರತೀಯ ಇತಿಹಾಸದ ಅವಲೋಕನ ಮಾಡಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ ಭಾರತದ ವೈಭವ ತಿಳಿಸುವ ರಾಯಭಾರಿಗಳಾಗಬೇಕು’ ಎಂದು ಹೇಳಿದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿ.ವಿ ಪ್ರಭಾರ ಕುಲಪತಿ ಅನಂತ್ ಜಾಂಡೇಕರ್, ದಿ ಮಿಥಿಕ್ ಸೊಸೈಟಿ ಸದಸ್ಯ ಎಂ.ಆರ್.ಪ್ರಸನ್ನಕುಮಾರ್, ಲೇಖಕ ಜಿ.ಬಿ.ಹರೀಶ, ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಕೊಟ್ರೇಶ್, ಸಂಚಾಲಕರಾದ ಡಿ.ಸುರೇಶ್, ಎಸ್.ದೇವರಾಜಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.