ಕುಣಿಗಲ್: ಪಟ್ಟಣದ ಹೃದಯ ಭಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 1977ರಲ್ಲಿ 9 ಗುಂಟೆ ಜಮೀನು 20 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದೆ. ಆದರೆ ಸರ್ಕಾರಿ ನಿಯಮ ಪಾಲಿಸಿ, ಜಮೀನು ವಶಕ್ಕೆ ಪಡೆದು ಭವನ ನಿರ್ಮಾಣಕ್ಕೆ ಮುಂದಾಗಿಲ್ಲ.
ಕಂದಾಯ ಇಲಾಖೆ ದಾಖಲೆಗಳ ಪ್ರಕಾರ, ಕುಣಿಗಲ್ ಕಸಬಾ ಗ್ರಾಮದ ಸರ್ವೆ ನಂ 110ರ 9 ಗುಂಟೆ ಸರ್ಕಾರಿ ಬ ಖರಾಬು ಜಮೀನನ್ನು ಜಿಲ್ಲಾಧಿಕಾರಿ 1977ರಲ್ಲಿ ವಾರ್ಷಿಕ ₹80 ಗುತ್ತಿಗೆ ದರ ವಿಧಿಸಿ, 20 ವರ್ಷಕ್ಕೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ತಾಲ್ಲೂಕು ಕಾಂಗ್ರೆಸ್ ಸಮಿತಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಷರತ್ತು ವಿಧಿಸಿ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿದ್ದರು.
ಆದರೆ ಕಾಂಗ್ರೆಸ್ ಸಮಿತಿ ಜಮೀನು ವಶಕ್ಕೆ ಪಡೆದು ಕಾಲಕಾಲಕ್ಕೆ ನಿಗದಿತ ವಾರ್ಷಿಕ ಗುತ್ತಿಗೆ ದರವನ್ನು ಸರ್ಕಾರಕ್ಕೆ ಪಾವತಿಸದ ಕಾರಣ ಪಹಣಿ ಕಾಲಂ 11ರಲ್ಲಿ ನಮೂದು ಮಾಡಿಲ್ಲ.
20 ವರ್ಷದ ಗುತ್ತಿಗೆ ಅವಧಿ 1997ಕ್ಕೆ ಮುಕ್ತಾಯವಾಗಿದ್ದರೂ, ಕಾಂಗ್ರೆಸ್ ಸಮಿತಿಯವರು ಗುತ್ತಿಗೆಯನ್ನು ಮುಕ್ತಾಯಗೊಳಿಸುವ ಬಗ್ಗೆಯಾಗಲಿ, ನವೀಕರಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಜಮೀನನ್ನು ನೀಡಿದ ಉದ್ದೇಶಕ್ಕೆ ಬಳಸಿಕೊಂಡಿಲ್ಲ.
2023 ರಲ್ಲಿ ಶಾಸಕ ಡಾ.ರಂಗನಾಥ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡರವರುಗಳು, ಗುತ್ತಿಗೆ ಆದೇಶವನ್ನು ನವೀಕರಿಸಿಕೊಡಲು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ..
ಶಾಸಕರ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಗುತ್ತಿಗೆ ನೀಡಿದ ಅವಧಿಯಿಂದ ಈವರೆಗೂ ಗುತ್ತಿಗೆದರದ ಎರಡು ಪಟ್ಟು ಮೊತ್ತ ಮತ್ತು ದಂಡ ಭರಿಸಿಕೊಂಡು ನಂತರ ಪ್ರಚಲಿತ ಮೌಲ್ಯ ಆಧರಿಸಿ ನಿಯಮಗಳ ಪ್ರಕಾರ ಕಲ್ಯಾಣ ಚಟುವಟಿಕೆಗೆ ನೀಡಲು ಪ್ರಸ್ತಾವನೆಯಲ್ಲಿ ಸೂಚನೆ ನೀಡಿದ್ದಾರೆ.
ತಾಲ್ಲೂಕಿನಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಸುಭದ್ರವಾಗಿದ್ದು, ಹುಚ್ಚಮಾಸ್ತಿಗೌಡ, ಅಂದಾನಯ್ಯ, ಎಸ್.ಪಿ ಮುದ್ದಹನುಮೇಗೌಡ, ವೈ.ಕೆ.ರಾಮಯ್ಯ ಮತ್ತು ಬಿ.ಬಿ.ರಾಮಸ್ವಾಮಿ ಗೌಡ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಭವನಕ್ಕೆ ಮಂಜೂರಾದ ಜಮೀನನ್ನು ನಿಯಮಾವಳಿಗಳ ಪ್ರಕಾಋ ವಶಕ್ಕೆ ಪಡೆದು ಭವನ ನಿರ್ಮಾಣಕ್ಕೆ ಗಮನಹರಿಸದಿರುವುದರಿಂದ ಆ ಪ್ರದೇಶದಲ್ಲಿ ಹತ್ತು ಹಲವಾರು ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದವರು ಭವನ ಕಟ್ಟಲು ಮುಂದಾಗುತ್ತಿದ್ದು, ದಲಿತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ದಲಿತ ಜಾಗೃತಿ ಸಮಿತಿಯ ದಲಿತ್ ನಾರಾಯಣ್ ಮನವಿ ಮಾಡಿದ್ದಾರೆ.
ಶಾಸಕ ಡಾ.ರಂಗನಾಥ್, 1977 ರಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಜಮೀನು ಮಂಜೂರಾಗಿದೆ, ಸರ್ಕಾರದ ನಿಯಮಗಳನ್ನು ಪಾಲಿಸಿ ಜಮೀನು ವಶಕ್ಕೆ ಪಡೆದು ಕಚೇರಿ ನಿರ್ಮಾಣಕ್ಕೆ ಮುಂದಾಗದ ಕಾರಣ ಕಾನೂನು ತೊಡಕುಗಳಿದ್ದು, ಎಲ್ಲವನ್ನು ನಿವಾರಿಸಿ ತಮ್ಮ ಅಧಿಕಾರಾವಧಿಯಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.