ADVERTISEMENT

ಕಾಂಗ್ರೆಸ್‌ನದ್ದು ಜಾತಿ ರಾಜಕಾರಣ: ಜೆ.ಪಿ.ನಡ್ಡಾ ಟೀಕೆ

ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 7:25 IST
Last Updated 6 ಜನವರಿ 2023, 7:25 IST
ತುಮಕೂರು ಶಕ್ತಿ ಕೇಂದ್ರದ ಪ್ರಮುಖರ ಕಾರ್ಯಕ್ರಮದ ಸಮಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಸುವಿಗೆ ಹಣ್ಣು, ಆಹಾರ ನೀಡಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದಾರೆ
ತುಮಕೂರು ಶಕ್ತಿ ಕೇಂದ್ರದ ಪ್ರಮುಖರ ಕಾರ್ಯಕ್ರಮದ ಸಮಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಸುವಿಗೆ ಹಣ್ಣು, ಆಹಾರ ನೀಡಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದಾರೆ   

ತುಮಕೂರು: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಮಿಷನ್, ಜಾತಿವಾದಿ ಪಕ್ಷ ಎನ್ನುವಂತಾಗಿದೆ. ಅಧಿಕಾರದಲ್ಲಿ ಇದ್ದಾಗ ದಲಿತರು, ಹಿಂದುಳಿದವರಿಗೆ ಏನನ್ನೂ ಮಾಡಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದರು.

ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದೆ. ಕೆಲವು ಸಮುದಾಯಗಳನ್ನು ತುಷ್ಟೀಕರಣ ಮಾಡುತ್ತಿದೆ ಎಂದು ಟೀಕಿಸಿದರು.

ಚುನಾವಣೆಗೆ ನಿಂತ ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರನ್ನೇ ಸೋಲಿಸಿದರು. ಬಿಜೆಪಿ ಎಲ್ಲಾ ಸಮುದಾಯದವರ ಒಟ್ಟಿಗೆ ಸಾಗುತ್ತಿದ್ದು, ಪರಿಶಿಷ್ಟರನ್ನು ರಾಷ್ಟ್ರಪತಿ ಮಾಡಲಾಯಿತು. ಈಗ ಆದಿವಾಸಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡುವ ಮೂಲಕ ತಳ ಸಮುದಾಯಗಳಿಗೂ ಅವಕಾಶ ಮಾಡಿಕೊಟ್ಟಿದೆ ಎಂದರು.

ADVERTISEMENT

ಕೇಂದ್ರ ಸರ್ಕಾರದ ಸಾಧನೆಗಳು, ಪ್ರಧಾನಿ ನರೇಂದ್ರ ಮೋದಿ ನೀಡಿದ ಕೊಡುಗೆಗಳ ಪಟ್ಟಿಯನ್ನು ಕಾರ್ಯಕರ್ತರ ಮುಂದಿಟ್ಟರು. ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಶಕ್ತಿ ಕೇಂದ್ರಗಳಲ್ಲಿರುವ ಪ್ರಮುಖರು ಎಲ್ಲರನ್ನೂ ಒಗ್ಗೂಡುವಂತೆ ಮಾಡಬೇಕು. ಪರಿಶಿಷ್ಟರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದ ಜನರ ಜತೆಗೆ ಒಟ್ಟಾಗಿ ಹೋಗಬೇಕು. ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಿದರೆ ಗೆಲುವು ಕಷ್ಟಕರವಾಗಲಾರದು ಎಂದು ಹೇಳಿದರು.

‘ತಳ ಮಟ್ಟದ ಕಾರ್ಯಕರ್ತರ ಜತೆಗೆ ಮಾತನಾಡುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ನೀವು ಪಕ್ಷ ಸಂಘಟಿಸಿದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಸರ್ಕಾರದ ಸಾಧನೆಗಳನ್ನು ನಿಮಗೆ ತಿಳಿಸಿದರೆ, ನೀವು ಜನರಿಗೆ ಮುಟ್ಟಿಸಲು ನೆರವಾಗುತ್ತದೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿಗೆ ಹೊಸ ಆಯಾಮ ಕೊಟ್ಟಿದ್ದಾರೆ’ ಎಂದು ಬೆನ್ನು ತಟ್ಟಿದರು.

ಕಾರ್ಯಕ್ರಮದ ನಂತರ ಸಿದ್ಧಂಗಾ ಮಠಕ್ಕೆ ತೆರಳಿ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಮಠದಲ್ಲೇ ಪ್ರಸಾದ ಸ್ವೀಕರಿಸಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.