ADVERTISEMENT

ಕಾರ್ಮಿಕರ ಕಲ್ಯಾಣಕ್ಕೆ 23 ಯೋಜನೆ ರೂಪಿಸಿದ್ದು ಮೈತ್ರಿ ಸರ್ಕಾರ

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಮಾ.ನ.ಗುರುದತ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 15:58 IST
Last Updated 8 ಏಪ್ರಿಲ್ 2019, 15:58 IST
ಮಾ.ನ.ಗುರುದತ್
ಮಾ.ನ.ಗುರುದತ್   

ತುಮಕೂರು: ‘ಮೈತ್ರಿ ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕಾಗಿ 23 ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಎರಡೂ ಪಕ್ಷಗಳ ಕಾರ್ಯಕರ್ತರು, ಪಕ್ಷದ ಕಾರ್ಮಿಕ ವಿಭಾಗದಿಂದ ಅರ್ಜಿಗಳನ್ನು ನೀಡಿ, ದಾಖಲೆ ಪಡೆದು ಯೋಜನೆಗಳು ಕಾರ್ಮಿಕರಿಗೆ ತಲುಪುವಂತೆ ಮಾಡುತ್ತಿದ್ದೇವೆ’ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಮಾ.ನ.ಗುರುದತ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ–1, ಯುಪಿಎ–2 ಸರ್ಕಾರ ಅಧಿಕಾರದಲ್ಲಿದ್ದಾಗ ಕಾರ್ಮಿಕರಿಗಾಗಿ 25 ಯೋಜನೆಗಳನ್ನು ಘೋಷಣೆಮಾಡಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರದ ಈ ಯೋಜನೆಗಳನ್ನು ನಾಲ್ಕು ವರ್ಷಗಳಾದರೂ ಅನುಷ್ಠಾನ ಮಾಡಿರಲಿಲ್ಲ. ಈಚೆಗೆ ಅಂದರೆ ಚುನಾವಣೆಗೆ ಹೋಗುವ 2 ತಿಂಗಳ ಮೊದಲು ಅಲ್ಪ ಮಾರ್ಪಾಡು ಮಾಡಿ ಆ ಯೋಜನೆಗಳನ್ನು ತಾನೇ ಮಾಡಿದ್ದು ಎಂದು ಪ್ರಚಾರ ಮಾಡುತ್ತಿದೆ’ ಎಂದು ಟೀಕಿಸಿದರು.

‘ಜಿಎಸ್‌ಟಿ, ನೋಟು ಅಮಾನ್ಯೀಕರಣದಿಂದ ಹಲವು ಸಣ್ಣ, ಅತೀ ಸಣ್ಣ ಕೈಗಾರಿಕೆಗಳು ಮುಚ್ಚಿಹೋದವು. ಉದ್ಯಮಗಳಲ್ಲಿ ಉದ್ಯೋಗ ಕಡಿತವಾದವು. ಹೊಸ ಕೈಗಾರಿಕೆಗಳು ಆರಂಭ ಆಗಲೇ ಇಲ್ಲ. ಉದ್ಯೋಗ ಸೃಷ್ಟಿ ಮಾಡಲೂ ಪ್ರಯತ್ನ ಮಾಡಲಿಲ್ಲ. ಎಚ್ಎಎಲ್, ಬಿಎಸ್ಎನ್‌ಎಲ್, ಎಂಟಿಎನ್‌ಎಲ್, ಏರ್ ಇಂಡಿಯಾ ಸೇರಿದಂತೆ ಅನೇಕ ಬೃಹತ್ ಕಂಪನಿಗಳು ದಿವಾಳಿಯಾಗಿವೆ. ಕಂಪನಿಗಳಲ್ಲಿ ಸಿಬ್ಬಂದಿ ಕಡಿತ, ಉದ್ಯೋಗಿಗಳು ಸ್ವಯಂ ನಿವೃತ್ತಿ, ಕಡ್ಡಾಯ, ಮುಚ್ಚುವ ಸ್ಥಿತಿ ತಲುಪಲು ಎನ್‌ಡಿಎ ಸರ್ಕಾರದ ಧೋರಣೆಗಳೇ ಕಾರಣ’ ಎಂದು ಟೀಕಿಸಿದರು.

ADVERTISEMENT

‘ಕೇಂದ್ರ ಸರ್ಕಾರದ ನಿರ್ಧಾರಗಳು ಕಾರ್ಮಿಕರ ಬದುಕಿನ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಆದರೂ ದೇಶದ ಹಿತದೃಷ್ಟಿಯಿಂದ ತೀವ್ರ ಮುಷ್ಕರಗಳನ್ನು ಮಾಡದೇ ತಾವು ದುಡಿಯುತ್ತಿರುವ ಉದ್ಯಮಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾರ್ಮಿಕ ವಿರೋಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ತರದೇ ಇರಲು ನಿರ್ಧರಿಸಿದ್ದಾರೆ’ ಎಂದು ಹೇಳಿದರು.

‘ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಆಯ್ಕೆಯಾಗಿ ಕಾರ್ಮಿಕರ ಹಿತಕ್ಕೆ ಶ್ರಮಿಸುವ ಭರವಸೆ ಇದೆ’ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀರಾಮಯ್ಯ ಮಾತನಾಡಿ, ‘ಕಾರ್ಮಿಕರ ಅಭಿವೃದ್ಧಿಗೆ ನಿಗದಿಯಾದ 38 ಸಾವಿರ ಕೋಟಿ ಹಾಗೆಯೇ ಇದೆ. ಅದನ್ನು ಕಾರ್ಮಿಕರ ಹಿತಕ್ಕೆ ಬಳಕೆ ಮಾಡಲು ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡಲಾಗಿದೆ. ಪುರೋಹಿತರೂ ಶ್ರಮ ಜೀವಿಗಳೇ ಎಂದು ನಾವು ಭಾವಿಸಿದ್ದು, ಅವರು ಸೇರಿದಂತೆ ಇನ್ನೂ ದುಡಿಯುವ ವರ್ಗದವರಿಗೆ ಸರ್ಕಾರದ ಯೋಜನೆ ಲಭಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಜೆಡಿಎಸ್ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಅಶ್ವತ್ಥ್, ಜಿಲ್ಲಾ ಘಟಕ ಅಧ್ಯಕ್ಷ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಅಧ್ಯಕ್ಷ ಸೈಯದ್ ದಾದಾಪೀರ್ ಮಾತನಾಡಿದರು. ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಬೆಳ್ಳಿ ಲೋಕೇಶ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.