ADVERTISEMENT

ಆಸೆಪಟ್ಟರೆ ಗೋ ಮಾಂಸ ತಿನ್ನುವೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಮೇ 2022, 20:03 IST
Last Updated 22 ಮೇ 2022, 20:03 IST
   

ತುಮಕೂರು: ‘ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕೆ’ ಎಂದು ಪ್ರಶ್ನಿಸಿದರು.

‘ಅಲ್ಪ‌ ಸಂಖ್ಯಾತರ ಹಕ್ಕುಗಳು, ಅವರ ಪರವಾಗಿ ಮಾತನಾಡಿದರೆ, ಸಂಘ ಪರಿವಾರದವರು ನೀನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದಿಯಾ ಎಂದು ಕೇಳುತ್ತಾರೆ. ನಮ್ಮ ಧರ್ಮದಲ್ಲಿ ನಿಷ್ಠೆಯ ಜತೆಗೆ ಇತರೆ ಧರ್ಮಗಳನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ದ್ವೇಷ, ಅಸೂಯೆ ಇದ್ದರೆ ನಾವು ಮನುಷ್ಯರಾಗಲು ಅರ್ಹರಲ್ಲ. ನಾವೆಲ್ಲ ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು‘ ಎಂದರು.

ADVERTISEMENT

‘ಸಂಘ ಪರಿವಾರದವರು ಧರ್ಮ, ಮನುಷ್ಯರ ನಡುವೆ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಜಾತಿ, ಧರ್ಮದ ಹೆಸರಲ್ಲಿ ಒಡೆಯುತ್ತಿದ್ದಾರೆ. ಅಂತಹವರ ಕೈಗೆ ಅಧಿಕಾರ ಕೊಟ್ಟರೆ ಸಮಾಜದಲ್ಲಿ ಮತ್ತಷ್ಟು ಒಡಕು ಮೂಡಲಿದೆ‌. ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್, ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಮಾತ್ರ ಹಿಂದೂನಾ? ನಾವು ಹಿಂದೂಗಳೇ. ಇತರೆ ಧರ್ಮಗಳ ಬಗ್ಗೆಯೂ ಗೌರವ ಇಟ್ಟುಕೊಂಡಿದ್ದೇವೆ‘ ಎಂದು ಹೇಳಿದರು.

ಮತಾಂಧರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಸಮಯದಲ್ಲಿ ಜೆಡಿಎಸ್‌ನವರು ಅದಕ್ಕೆ ವಿರೋಧ ಮಾಡಲಿಲ್ಲ. ಸಂಘ ಪರಿವಾರದ ಜತೆಗೆ ಸೇರಿಕೊಂಡು ಸರ್ಕಾರ ಮಾಡಿದವರು ಯಾವ ಜಾತ್ಯತೀತರು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.